ವಿಷಯಕ್ಕೆ ಹೋಗಿ
ನೆರೆಯ ನಾಡು ಕಂಡು ಬಂದು ತುಂಬಾ ದಿನಗಳ ನಂತರ.....

ಮಂಗಳೂರಿನಿಂದ ಪ್ರಕಟವಾಗುತ್ತಿರುವ ದಿನಪತ್ರಿಕೆಯೊಂದರ ಕೆಲಸ ಬಿಟ್ಟು ಬೆಂಗಳೂರಿಗೆ ಬಂದೆ. ಆಗಷ್ಟೆ ಗೆಳೆಯ ದಯಾ ಫೋನು ಮಾಡಿ ಉತ್ತರ ಕರ್ನಾಟಕದ “ನೆರೆ ಪೀಡಿತ ಹಳ್ಳಿಗಳಿಗೆ ಹೋಗಿ ಬರೋಣವಾ” ಅಂದದ್ದು. ಅವತ್ತು ಸೆ. ೫ನೇ ತಾರೀಖು. ನನ್ನ ಬಳಿಯೂ ನಿರ್ದಿಷ್ಟ ಯೋಜನೆಗಳೇನು ಇರಲಿಲ್ಲ. ನೆರೆ ಸುದ್ದಿಗಳನ್ನು ಟಿವಿ, ಪತ್ರಿಕೆಗಳಲ್ಲಿ ಓದಿದ್ದೆ. ಹಾಗಾಗಿ ಮರು ಯೋಚನೆ ಮಾಡದೆ ಇದ್ದ ಚಿಲ್ಲರೆ ದುಡ್ಡನ್ನು ಎತ್ತಿಕೊಂಡು ಹೊರಟು ನಿಂತಿದ್ದೆ.

ಮುಂದಿನ ೧೦ದಿನ, ೯ ರಾತ್ರಿ ಸರಿ ಸುಮಾರು ೨೫೦ ಗಂಟೆಗಳನ್ನು ನೆರೆ ಆವೃತ ಪ್ರದೇಶಗಳಲ್ಲಿ ಓಡಾಡಿ ಮತ್ತೆ ಗೂಡು ಸೇರಿಕೊಂಡೆ. ಎದುರಿಗೆ ನಾವು ಚಿತ್ರೀಕರಿಸಿಕೊಂಡ ವಿಡಿಯೋ ಟೇಪುಗಳು ಹಾಗೂ ಸಾವಿರಕ್ಕೂ ಅಧಿಕ ಫೋಟೊಗಳಿದ್ದವು. ಅವತ್ತೇ ಬ್ಲಾಗಿಗೆ ಬರೆದು ಬಿಡಬೇಕು ಅಂದುಕೊಂಡೆ. ಆದರೆ ಅಷ್ಟರಲ್ಲೇ ರಾಜ್ಯದ ರಾಜಕಾರಣದಲ್ಲಿ ಬಂಡಾಯದ ಬಿಸಿ ಆರಂಭವಾಯಿತು. ಯಡ್ಡಿ-ರೆಡ್ಡಿ ಬಣಗಳ ನಡುವಿನ ಕದನದಲ್ಲಿ ನೆರೆ ತೆರೆ-ಮರೆಗೆ ಸರಿದಂತಾಗಿತ್ತು. ಕೊನೆಗೆ ಕೆಲವು ಗೆಳೆಯರ ಅಪೇಕ್ಷೆ ಮೇರೆಗೆ ನೆರೆ ಹಾಗೂ ನಮ್ಮ ಸೀಮಿತ ಅನುಭವಗಳನ್ನು ಇಟ್ಟುಕೊಂಡು ಒಂದು ಸಾಕ್ಷ್ಯ ಚಿತ್ರವನ್ನು ಮಾಡುವ ಸಾಹಸಕ್ಕೆ ಇಳಿದುಬಿಟ್ಟೆವು. ಅಲ್ಲಿಗೆ ಬ್ಲಾಗ್ ಮತ್ತೆ ಮರೆತೇ ಹೊದಂತಾಗಿತ್ತು. ಸಧ್ಯ ಡಾಕ್ಯುಮೆಂಟರಿಗಾಗಿ ಸ್ಕ್ರಿಪ್ಟ್ ಕೆಲಸ ಮುಗಿಸಿ ಮತ್ತೆ ಬ್ಲಾಗ್ ಅಂಗಳದಲ್ಲಿ ಬಂದು ನಿಂತಿದ್ದೇನೆ.
ಆದರೆ ನೆರೆಯ ಕುರಿತು ನಾನು ನನ್ನ ಅನುಭವಗಳನ್ನು ದಾಖಲಿಸಬಹುದೇ ಹೊರತು ಉಳಿದ ಮಾಹಿತಿಗಳು ಈಗಾಗಲೇ ಟಿವಿ-ಪತ್ರಿಕೆಗಳಲ್ಲಿ ಬಂದಾಗಿದೆ. ಮತ್ತೆ ಅದನ್ನೇ ಬರೆಯುವುದು ಹೊಸತನವೂ ಅಲ್ಲ. ಉಳಿದದ್ದು ನಮ್ಮ ನೆರೆ ಪೀಡಿತ ಜಿಲ್ಲೆಗಳಲ್ಲಿ ಯಾವ ಟಿವಿ, ಪತ್ರಿಕೆಗಳ ಕಣ್ಣಿಗೆ ಬೀಳದ ಕೆಲವನ್ನು ಇಲ್ಲಿ ಬರೆಯಬೇಕು ಎಂದುಕೊಂಡ್ಡಿದ್ದೇನೆ. ಹಾಗಾಗಿ ಇದು ನೆರೆಯ ನಾಡಲ್ಲಿ ಕಂಡ ವೈಯುಕ್ತಿಕ ಅನುಭವಗಳು ಎಂದು ಕರೆಯುವುದೇ ಲೇಸು. ಮತ್ತೆ ಇದೊಂದು ವಿಚಿತ್ರ ಪ್ರವಾಸ ಕಥನ ಕೂಡ!

@

ಮುಂಜಾನೆಯ ಮೊದಲ ಕಿರಣ ಭೂಮಿಗೆ ತಾಕುವ ಸಮಯದಲ್ಲಿ ಬಸ್ಸು ಹೊಸಪೇಟೆಯ ರಸ್ತೆಯಲ್ಲಿ ಓಡುತ್ತಿತ್ತು. ಹಿಂದಿನ ವಾರ ಪೂರ್ತಿ ಬಿದ್ದ ಮಳೆಗೆ ಮಲೆನಾಡಿನ ಹಸಿರನ್ನು ನಾಚಿಸುವಂತೆ ಹೊಸಪೇಟೆಯ ತುಂಗ-ಭದ್ರ ಅಣೆಕಟ್ಟಿನ ಸುತ್ತಲಿನ ಪರಿಸರ ಕಂಗೊಳಿಸುತ್ತಿತ್ತು. ಆ ಒಂದು ಕ್ಷಣ ಮುಂದೆ ಎದುರಾಗಲಿದ್ದ ನೆರೆಯ ಭೀಕರ ಹಳ್ಳಿಗಳ ಚಿತ್ರಣ ಮರೆಯಾಗಿ ಹಸಿರಿನ ಸೊಬಗನ್ನು ಸವಿಯುವ ಸರದಿ ನನ್ನದಾಗಿತ್ತು.



“ಮುಂಜಾನೆ ೭ಕ್ಕೆ ರಾಯಚೂರಲ್ಲಿರ್ತೀರ ಸರ” ಎಂದ ಬಸ್ಸು ಸಿಬ್ಬಂದಿಗಳ ಅಶ್ವಾಸನೆಯನ್ನು ಕಡಿದು ಹೋಗಿದ್ದ ರಸ್ತೆ ಸಂಪರ್ಕ ವ್ಯವಸ್ಥೆ ಸುಳ್ಳಾಗಿಸಿತ್ತು. ರಾಯಚೂರು ತಲುಪುವ ಹೊತ್ತಿಗೆ ಮದ್ಯಾಹ್ನವಾಗಿತ್ತು. ಅಲ್ಲಿನ ಹೋಟೆಲ್ ಒಂದರಲ್ಲಿ ನಮ್ಮ ಲಗೇಜುಗಳನ್ನು ಇಳಿಸಿ, ಹೊಟ್ಟೆಗೆ ಒಂದಷ್ಟು ತುಂಬಿಸಿಕೊಂಡು ’ಎಲೆ ಬಿಚ್ಚಾಲೆ’ ಎಂಬ ಆಂದ್ರ ಪ್ರದೇಶದ ಅಂಚಿಗಿರುವ ಹಳ್ಳಿ ತಲುಪುವಾಗ ಸಂಜೆಯಾಗಿತ್ತು. ಸೂರ್ಯ ತನ್ನ ಕೆಲಸ ಮುಗಿಸಿ ವಿದಾಯ ಹೇಳುವ ತರಾತುರಿಯಲ್ಲಿದ್ದ. ಊರ ಜನ ಕರ್ನೂಲಿನ ಕೆಲವು ಸ್ವಯಂ ಸೇವಕರು ತಂದಿದ್ದ ಬಟ್ಟೆಗಳಿಗಗಾಗಿ ಕಿತ್ತಾಡುತ್ತಿದ್ದರು. ಉಳಿದ ಕೆಲವರು ನಮ್ಮನ್ನು ಕಂಡೊಡನೆ ’ಇಲ್ಲಿ ಬನ್ರಿ, ನಮ್ ಮನಿ ನೋಡ್ರಿ ಸರ’ ಎಂದು ಹಿಂದೆ ಬಿದ್ದರು. ’ಟಿವಿ ಲಿ ಕಾಣ್ತೀವೇನ್ರಿ’ ಎಂದ ಕೆಲವರು ಕ್ಯಾಮರ ಎದುರಿಗೆ ನಿಂತು ನಗಲು ಆರಂಭಿಸುತ್ತಿದ್ದರು.
ವಿಚಿತ್ರ ಕಲ್ಪನೆಗಳನ್ನು ತುಂಬಿಕೊಂಡು ಹೋಗಿದ್ದ ನಮಗೆ ಇದು ಅನಿರೀಕ್ಷಿತ ಸ್ವಾಗತ. ನಾವು ಹೋಗುವ ಹೊತ್ತಿಗಾಗಲೇ ನೆರೆ ಇಳಿದು ಹೋಗಿತ್ತು. ಊರುಗಳು ಸ್ಮಶಾನದಂತೆ ಕಾಣುತ್ತಿದ್ದವು. ಜನ ಉಟ್ಟ ಬಟ್ಟೆಯಲ್ಲಿ ತಮ್ಮದೆಲ್ಲವನ್ನು ಕಳೆದುಕೊಂಡು ನಿಂತಿದ್ದರು. ಸರಕಾರ ಎಂಬ ಅಧಿಕೃತ ವ್ಯವಸ್ಥೆ ನಾಪತ್ತೆಯಾಗಿತ್ತು. ಇವೆಲ್ಲವು ಎಷ್ಟು ವಾಸ್ತವವೋ ಅಷ್ಟೆ ವಾಸ್ತವವಾದದ್ದು ನೆರೆ ಪೀಡಿತ ಜನರ ತದ್ವಿರುದ್ದ ನಡವಳಿಕೆ. ನಾವು ಚುನಾಯಿಸಿದ ಜನಪ್ರತಿನಿಧಿಗಳು ಇಂತಹ ಸಂದರ್ಭದಲ್ಲಿ ನಮ್ಮ ಪಾಲಿಗೆ ಇದ್ದಾರೆ ಹಾಗೂ ಇರಬೇಕು ಎಂಬ ಸಾಮಾನ್ಯ ಗ್ರಹಿಕೆ ಕೂಡ ಇರುವ ಜನರನ್ನು ಊರಲ್ಲಿ ಹುಡುಕಿದರೂ ಸಿಗಲಿಲ್ಲ!. ಇದು ಯಾರ ತಪ್ಪು ಎಂಬುದಕ್ಕಿಂತ ಹಲವಾರು ವರ್ಷಗಳ ವೈಫಲ್ಯಗಳ ಫಲ ಇದು ಎಂಬುದು ಸರಿ ಎನ್ನಿಸುತ್ತದೆ.



ಆ ಹೊತ್ತಿಗಾಗಲೇ ಊರು ಬಿಟ್ಟವರು ತಮ್ಮ ಅಳಿದುಳಿದ ಅಸ್ತಿ ಪಾಸ್ತಿಗಾಗಿ ಊರಿಗೆ ಮರಳುತ್ತಿದ್ದರು. ಕೆಲವರು ತಮ್ಮ ಮುರಿದು ಬಿದ್ದ ಮನೆಗಳ ಅವಶೇಷಗಳ ಅಡಿಯಲ್ಲಿ ಕಳೆದುಕೊಂಡದ್ದು ಸಿಗಬಹುದಾ? ಎಂದು ತಡಕಾಡುತ್ತಿದ್ದರು. ಶಾಲೆಯ ಒಳಗಡೆ ಒಲೆಯೊಂದು ಹೊತ್ತಿ ಉರಿಯುತ್ತಿತ್ತು. ಮುಂದೆ ಕುಳಿತು ಕಟ್ಟಿಗೆ ತುರುಕುತ್ತಿದ್ದ ಅಜ್ಜಿಯೊಂದು ಕ್ಯಾಮರ ಕಂಡೊಡನೆ ತನ್ನ ಸೆರಗನ್ನು ಸರಿಪಡಿಸಿಕೊಂಡಿತು. ಸುಮ್ಮನೆ ನಕ್ಕೆ. ಹತ್ತಿರ ಕರೆದು ’ಏನಾರ ಉಣ್ತೀಯಾ ಮಗಾ’ ಅಂತು. ಮಾತು ಇಲ್ಲವಾಗಿತ್ತು. ’ಇದು ಕಲಿಗಾಲ ಮಗ. ಎಲ್ಲ ಅಳಿತದೆ. ಏನಿದ್ರು ಏನು ಬಂತು ಹೇಳ. ಜನ ಮಾಡಿದ್ದು ಉಣ್ತೀದ್ದಾರೆ’ ಎಂದು ತನ್ನ ತೆಲಗು ಮಿಶ್ರಿತ ಕನ್ನಡದಲ್ಲಿ ಹೇಳಿ ತನ್ನ ಕೆಲಸ ಮುಂದುವರಿಸಿತು ಅಜ್ಜಿ. ಇದಕ್ಕಿಂತ ಜಾಸ್ತಿ ಪಾಪ ಮಾಡಿದವರು ನೆಮ್ಮದಿಯಾಗಿ ಬದುಕುತ್ತಿದ್ದಾರೆ ಅಜ್ಜಿ ಎಂದು ಹೇಳಬೇಕೆನ್ನಿಸಿತು. ಯಾಕೋ ಕತ್ತಲೆಯಲ್ಲಿ ನನ್ನ ಅದುರುವ ತುಟಿಗಳು ಅಜ್ಜಿಯ ಕಣ್ಣಿಗೆ ಬೀಳಲಿಲ್ಲ!.

ಎಲೆಬಿಚ್ಚಾಲೆ ಕತ್ತಲನ್ನು ಹೊದ್ದು ಮಲಗಿತ್ತು. ಆಗಷ್ಟೆ ತೆರೆದುಕೊಂಡ ಹೋಟೆಲ್ಲಿಂದ ಯಾರೋ ಟೀ ಕಳುಹಿಸಿದರು. ಕುಡಿದು ಮುಗಿಸಿ ಹೊರಟರೆ ’ಏನಾರ ಉಣ್ತೀಯ ಮಗಾ’ ಅಂದ ಅಜ್ಜಿ ಮುಖ ಎದುರಿಗೆ ಬಂದಂತಾಗಿ ಕಣ್ಣು ಮುಚ್ಚಿಕೊಂಡೆ.

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

‘ಹೆಮ್ಮರ’ ಹಳ್ಳಿ ಶಾಲೆಯ ಮಕ್ಕಳಿಗೆ ವರ! “ಕನ್ನಡಿಗಳನ್ನು ಕಿಟಕಿಗಳಾಗಿ ಪರಿವರ್ತಿಸುವುದೇ ಶಿಕ್ಷಣದ ಬಹುಮುಖ್ಯ ಕರ್ತವ್ಯ” -ಸಿಡ್ನಿ ಜೆ ಹ್ಯಾರಿಸ್. ಭಾರತದಲ್ಲಿ ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿರುವುದು ಪ್ರಾಥಮಿಕ ಶಿಕ್ಷಣ. ಸರಕಾರಿ ಶಾಲೆಗಳಿಗೆ ಹೋಗುವ ಮಕ್ಕಳಿಗೆ ಉತ್ತಮ ಭವಿಷ್ಯ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೂ ಕೆಲವೊಮ್ಮೆ ಹಳ್ಳಿ ಶಾಲೆಗಳಲ್ಲಿ ಕ್ರಿಯಾಶೀಲತೆಯ ಕುಡಿಗಳು ಅರಳುತ್ತವೆ. ಇದು ಭಾರತದಂತಹ ದೇಶದಲ್ಲಿರು ಮತ್ತೊಂದು ಸಾಧ್ಯತೆ. ಸೆಲೆಬ್ರಿಟಿಗಳು ಎಂದು ಕರೆಸಿಕೊಳ್ಳುವ ಬಹುತೇಕ ಮಂದಿ ಹಳ್ಳಿ ಶಾಲೆಗಳಲ್ಲಿ ಕಲಿತು ಬಂದಿರುವುದು ಇದಕ್ಕೆ ಸಾಕ್ಷಿ. ಶಿಕ್ಷಣ ಎನ್ನುವುದು ನಾವು ಕಲಿತದ್ದನ್ನು ಅಧಿಕೃತಗೊಳಿಸುತ್ತದೆ. ಶಿಕ್ಷಕರು ಕೇವಲ ಮಾರ್ಗದರ್ಶನ ನೀಡಬಹುದೇ ಹೊರತು ಅದರಾಚೆಗಿನ ನಿರೀಕ್ಷೆಗಳಿಗೆ ಅವರು ನೀರೆರೆಯಲು ಸಾಧ್ಯವಿಲ್ಲ. ಆದರೆ ಇಂತಹ ಸಣ್ಣ ಮಾರ್ಗದರ್ಶನಗಳು ಸರಕಾರಿ ಶಾಲೆಗಳಲ್ಲಿ ಸಿಗದಿರುವ ಕಾರಣಕ್ಕೆ ಖಾಸಗಿ ಶಾಲೆಗಳ ಮೊರೆ ಹೋಗುವ ಪೊಷಕರು ನಮ್ಮಲ್ಲಿದ್ದಾರೆ. ಸರಕಾರಗಳ ದೂರದೃಷ್ಠಿಯ ಕೊರತೆ, ಸೌಲಭ್ಯಗಳ ಕೊರತೆ ಹಾಗೂ ಶಿಕ್ಷಕರಲ್ಲಿ ಬದ್ದತೆಯ ಕೊರತೆಗಳು ಇಂದು ಭಾರತದ ಪ್ರಾಥಮಿಕ ಶಿಕ್ಷಣದಲ್ಲಿನ ಬಹುಮುಖ್ಯ ಕೊರತೆಗಳು. ಆದರೆ ಇವುಗಳ ನಡುವೆಯೇ ಕುಂ.ವಿ ತರಹದ ಆದರ್ಶ ಶಿಕ್ಷಕರು ಕುಗ್ರಾಮಗಳ ಶಾಲೆಗಳಲ್ಲಿ ಕ್ರಾಂತಿಕಾರಕ ಬದಲಾವಣೆ
ಮಹಾಮಾರಿಯ ಭೀತಿಯಲ್ಲಿದ್ದ ತಲೆಮಾರಿ ಹಾಗೂ ಆಂದ್ರದ ಕುರಿತು ಅಭಿಮಾನ! ಮುಂಜಾನೆ ಹೊರಡುವಾಗ ತಲುಪಲಿದ್ದ ಹಳ್ಳಿಯ ಹೆಸರು ಕೂಡ ಗೊತ್ತಿರಲಿಲ್ಲ. ಸ್ಥಳೀಯ ಎನ್‌ಜಿಒ ಒಂದರ ಸಹಾಯದಿಂದ ’ತಲೆಮಾರಿ’ ಹಳ್ಳಿಗೆ ಹೊರಟಿದ್ದೆವು. ರಾಯಚೂರಿನಿಂದ ಸುಮಾರು ೫೨ ಕಿಮೀ ದೂರದಲ್ಲಿರುವ ತಲೆಮಾರಿ ನಾವು ಕಂಡ ಇತರ ಹಳ್ಳಿಗಳಿಗೆ ಹೋಲಿಸಿದರೆ ಅತಿ ಹೆಚ್ಚು ಹಾನಿಗೊಳಗಾದ ಹಳ್ಳಿ. ನಿಂತ ನೆಲದಿಂದ ಸುಮಾರು ೪೦ ಅಡಿ ಎತ್ತರಕ್ಕೆ ನೆರೆಯ ನೀರು ನುಗ್ಗಿ ಬಂದಿತ್ತಂತೆ. ಅದಕ್ಕೆ ಕುರುವುಗಳಂತೆ ನಾವು ಹೋದಾದ ಅಳಿದುಳಿದ ಮನೆಯ ಗೋಡೆಗಳ ಮೇಲೆ ಕೆಸರು ನೀರಿನ ಕುರುವು ಉಳಿದುಕೊಂಡಿತ್ತು. ತಲೆಮಾರಿಯ ಇನ್ನೊಂದು ವಿಶೇಷ ಎನಪ್ಪಾ ಅಂದ್ರೆ, ರಾಯಚೂರಿನ ಇತರ ನೆರೆ ಪೀಡಿತ ಹಳ್ಳಿಗಳಿಗೆ ಇಲ್ಲಿನ ಜನ ಮಾದರಿಯಾಗಿದ್ದರು. ನೆರೆ ನಿಂತು ಮೂರು ದಿನಗಳದ್ರೂ ಯಾವ ಜನಪ್ರತಿನಿಧಿಗಳು ವಿಚಾರಿಸಿಕೊಳ್ಳಲಿಲ್ಲ ಎಂಬ ಸಿಟ್ಟಿಗೆ ಎಂಎಲ್‌ಎ ಕಾರಿಗೆ ಬೆಂಕಿ ಇಟ್ಟಿದ್ದರು ಹಳ್ಳಿಯ ಜನ. ನಾವು ಹೋದಾಗ ಒಂದು ಪೊಲೀಸ್ ತುಕುಡಿ ಅತಂಕದಿಂದಲೇ ಊರು ಕಾಯುತ್ತಾ ನಿಂತಿತ್ತು. ಸುಟ್ಟು ಕರಕಲಾದ ವಾಹನಗಳು ನೆರೆಯ ಸ್ಮಾರಕಗಳಂತೆ ಉಳಿಸಿಕೊಂಡಿದ್ದರು. ಊರು ತುಂಬ ಸತ್ತ ಎಮ್ಮೆಗಳ ಹೆಣಗಳ ತುಂಬಾ ಹುಳುಗಳು ಮಿಜಿಗುಡುತ್ತಿದ್ದವು. ಮುಂದೆ ಎದುರಾಗಬಹುದಾದ ಮಹಾಮಾರಿಯೊಂದರ ಮುನ್ಸೂಚನೆಯಂತೆ ಊರು ಗಬ್ಬು ವಾಸನೆ ಹೊಡೆಯುತ್ತಿತ್ತು. ಊರೊಳಗೆ ಕಾಲಿಡಲಾಗದಂತೆ ಕೆಸರು ತುಂಬಿಕೊಂಡಿತ್ತು. ಆದರೆ ಬಹುತೇಕರು ತಮ್ಮ ಮನೆಗಳ ಒಳಗೆ ಅಳಿದ
ದೇವೆಂದ್ರ ಎಂಬ ಹಸನ್ಮುಖಿ….! ರಾಯಚೂರು ಮುಗುಸಿ, ಕೊಪ್ಪಳದ ಕೆಲವು ಹಳ್ಳಿಗಳಲ್ಲಿ ಓಡಾಡಿಕೊಂಡು ಸೀದಾ ಹೊರಟಿದ್ದು ಗದಗ ಜಿಲ್ಲೆಗೆ. ಅಲ್ಲಿನ ಕೆಲವು ಗೆಳೆಯರು ಜೊತೆಯಾಗುತ್ತೇವೆ ಎಂದು ಹೇಳಿದ್ದರು ನಾವು ತಲುಪುವ ಹೊತ್ತಿಗೆ ಅವರು ತಮ್ಮದೇ ಕೆಲಸದ ಮೇಲೆ ಹೊರಟು ಹೋಗಿದ್ದರು. ಗದಗ ಜಿಲ್ಲೆಯ ರೋಣ ತಾಲೂಕಿನ ಬಿ.ಎಸ್. ಬೆಲೇರಿ ಎಂಬ ಜಿಲ್ಲಾ ಕೇಂದ್ರದಿಂದ ೫೫ ಕಿ.ಮೀ ದೂರದ ಹಳ್ಳಿಯೊಂದನ್ನು ತಲುಪುವುದೇ ದೊಡ್ಡ ಸಾಹಸದ ಮಾತಾಗಿತ್ತು. ಊರಿಗಿದ್ದ ಒಂದು ಹಳೆಯ ಸೇತುವೆ ಬಿದ್ದು ಹೋಗಿದ್ದರಿಂದ ಹಳ್ಳಿಗೆ ರಸ್ತೆ ಸಂಪರ್ಕವೇ ಇಲ್ಲವಾಗಿತ್ತು. ನಾವು ಹೋಗುವಾಗ ಹೊಳೆಯ ನೀರು ಕಡಿಮೆಯಾಗಿತ್ತು. ಹೊಳೆಯ ವರೆಗೂ ಟಮ್ ಟಮ್ ಎಂದು ಕರೆಯುವ ಆಟೋ ರಿಕ್ಷಾವನ್ನು ಬಾಡಿಗೆಗೆ ಹಿಡಿದು ಅಲ್ಲಿಂದ ಮೂರು ಕಿಮೀ ನಡೆದರೆ ಬೇಲೆರಿ ಸಿಗುತ್ತದೆ. ನಿಂಗು ಬೆಲೇರಿಯಲ್ಲಿ ಪಿಯುಸಿ ಓದಿರುವ ಯುವಕ. ಅಷ್ಟೆ ಅಲ್ಲ ನಿಂಗುಗೆ ಸ್ವಲ್ಪ ರಾಜಕೀಯದ ಗೀಳಿದೆ. ಸ್ಥಳೀಯ ರಾಜಕಾರಣಿಗಳ ಸೋಗಲಾಡಿತನಗಳು ಅನುಭವಕ್ಕೆ ಬಂದಿವೆ. ನಮ್ಮೆದುರು ಆರಂಭದಲ್ಲಿ ನೆರೆಯ ಸುತ್ತಮುತ್ತಲೇ ಮಾತನಾಡಿದ ನಿಂಗು ಮಾತಿನಲ್ಲಿ ಒಂದು ಸಾತ್ವಿಕ ಸಿಟ್ಟಿತ್ತು. ನಿಧಾನವಾಗಿ ಮಾತನಾಡಲು ಆರಂಭಿಸಿ ಕೊನೆಗೆ ಸ್ಥಳೀಯ ಗ್ರಾಮ ಪಂಚಾಯ್ತಿಯಲ್ಲಿ ಮೊದಲು ಬದಲಾವಣೆ ಆಗ್ಬೇಕು, ಹಾಗಾಗಿ ಕೆಲಸಕ್ಕೆ ಗೆಳೆಯರು ಬೆಂಗಳೂರಿಗೆ ಹೋಗೊಣ ಅಂದ್ರು ಇಲ್ಲೇ ಇದ್ದೀನಿ, ಈಗ ನೋಡಿ ನೆರೆ. ಏನಾದ್ರೂ ಒಳ್ಳೆದೂ ಮಾಡ್ಬೇಕು ಅಲ್ವಾ ಎಂದು ಬೆಂಗಳೂರು ಕನ್ನಡದ