ವಿಷಯಕ್ಕೆ ಹೋಗಿ
ದಲ್ಲಿ ೨೦೦೯. ಜುಲೈ,28ರಲ್ಲಿ ಪ್ರಕಟವಾದ ಲೇಖನ

ನಮಗೆ ಈತ ಭಯೋತ್ಪಾದಕ. ಅವರಿಗೆ ಬರೀ ‘ಬಂದೂಕುಧಾರಿ!’
ಪ್ರಶಾಂತ್ ಹುಲ್ಕೋಡು
ಮಂಗಳವಾರ, 2009 (06:04 IST)

ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್ ಗೊತ್ತಲ್ಲ. ಅದೇ ಮುಂಬೈ ದಾಳಿ ಪ್ರಕರಣದಲ್ಲಿ ಸೆರೆ ಸಿಕ್ಕ ಏಕೈಕ ಆರೋಪಿ. ಸಧ್ಯ ಪ್ರಪಂಚದ ಮಾಧ್ಯಮಗಳ ಮುಖ ಪುಟದಲ್ಲಿ ಕಸಬ್ ಜಾಗ ಪಡೆದುಕೊಂಡಿದ್ದಾನೆ. ವಿಶೇಷ ನ್ಯಾಯಾಲಯದ ವಿಚಾರಣೆ ಸಮಯದಲ್ಲಿ ತನ್ನ ಉಡಾಫೆ- ಹಾಗೂ ವಿಚಿತ್ರ ನಡವಳಿಕೆಗಳಿಂದ ಎಲ್ಲರ ಗಮನ ಸೆಳೆದಿರುವ ಕಸಬ್ ಕುರಿತಾದ ಲೇಟೆಸ್ಟ್ ಸುದ್ಧಿಯೊಂದು ಬಂದಿದೆ. ಏನಪ್ಪ ಅಂದ್ರೆ, ಕಸಬ್ ಹಾಗು ಆತನ ಉಳಿದ ೯ ಜನ ಕಳೆದ ನವೆಂಬರ್‌ನಲ್ಲಿ ಮುಂಬೈ ಎಂಬ ಮಹಾನಗರಿಗೆ ಲಗ್ಗೆ ಇಟ್ಟದ್ದು ನಿಮಗೆ ಗೊತ್ತೇ ಇದೆ. ಈಗ ಅವರ ಕೃತ್ಯವನ್ನು ಏನೆಂದು ಕರೆಯಬೇಕು ಎಂದು ಸುದ್ಧಿ ಮನೆಗಳ ಪದ ಪ್ರಯೋಗಶಾಲೆಯಲ್ಲಿ ಸಾಣೆ ಹಿಡಿಯಲಾಗುತ್ತಿದೆ.
ಕಸಬ್ ಪ್ರಕರಣ ಕುರಿತು ಸಿಎನ್ ಎನ್ ವರದಿ


ಇದಕ್ಕೆ ಕಾರಣವೂ ಇದೆ. ಕಸಬ್ ವಿಚಾರಣೆಗಳನ್ನು ವರದಿ ಮಾಡುತ್ತಿರುವ ಅಮೆರಿಕಾದ ಬಹುತೇಕ ಮಾಧ್ಯಮಗಳು ಕಸಬ್‌ನನ್ನು ಭಯೋತ್ಪಾದಕ ಎಂದು ಕರೆಯುತ್ತಿಲ್ಲ. ನ್ಯೂಯಾರ್ಕ್ ಟೈಮ್ಸ್‌ನಿಂದ ಹಿಡಿದು ವಾಲ್ ಸ್ಟ್ರೀಟ್ ಜರ್ನಲ್‌ವರೆಗೆ ಕಸಬ್ ಗನ್ ಮ್ಯಾನ್ ಅಷ್ಟೆ. ಅಮೆರಿಕಾದ ಪತ್ರಿಕೆಗಳ ಈ ಪದ ಪ್ರಯೋಗ ಸುದ್ಧಿ ಪತ್ರಿಕೆಗಳಲ್ಲಿ ಭಾಷೆ ಬಳಕೆಯ ಕುರಿತಾದ ಹೊಸ ಚರ್ಚೆಗೆ ಕಾರಣವಾಗಿದೆ.

ಕಸಬ್ ನ್ಯಾಯಾಲಯದಲ್ಲಿ ಇದ್ದಕ್ಕಿದ್ದ ಹಾಗೆ ‘ನಾನು ತಪ್ಪು ಮಾಡಿದ್ದೇನೆ, ನನ್ನನ್ನು ಗಲ್ಲಿಗೇರಿಸಿ’ ಎಂದು ತಪ್ಪೊಪ್ಪಿಕೊಂಡ ನಾಟಕೀಯ ಬೆಳವಣಿಗೆ ನಡೆದ ನಂತರ ವಾಷಿಂಗ್‌ಟನ್ ಪೋಸ್ಟ್ ಪತ್ರಿಕೆ ೪೨೮ ಪದಗಳ ವರದಿಯೊಂದನ್ನು ಪ್ರಕಟಿಸಿತು. ‘ತಪ್ಪೊಪ್ಪಿಕೊಂಡ ಮುಂಬೈ ಗನ್ ಮ್ಯಾನ್’ ಎಂಬ ತಲೆಬರಹ ಹೊತ್ತಿದ್ದ ಈ ವರದಿಯಲ್ಲಿ ಎಲ್ಲಿಯೂ ‘ಭಯೋತ್ಪಾದಕ’ ಎಂಬ ಪದವನ್ನು ಬಳಸಲಿಲ್ಲ. ಹಾಗೆಯೆ ೧೦೫೦ ಪದಗಳ ನ್ಯೂಯಾರ್ಕ್ ಟೈಮ್ಸ್‌ನ ಇಂತಹದೇ ವರದಿಯಲ್ಲಿ ಕಸಬ್ ಕೇವಲ ‘ಶಂಕಿತ ದಾಳಿಕೋರ’ ಅಷ್ಟೆ. ಆದರೆ ವಾಲ್ ಸ್ಟ್ರೀಟ್ ಜರ್ನಲ್ ಮುಂಬೈ ದಾಳಿಯನ್ನು ‘ಭಯೋತ್ಪಾದಕ ಕೃತ್ಯ’ ಎಂದು ಕರೆದಿದ್ದರೂ, ಕಸಬ್ ಪಡೆಯನ್ನು ‘೧೦ ಶಂಕಿತ ಗನ್ ಮೆನ್’ ಎಂದು ಹೆಸರಿಸಿತ್ತು.


ಕಸಬ್ ಪ್ರಕರಣ ಕುರಿತು ‘ವಾಷಿಂಗ್ ಟನ್’ ಪೋಸ್ಟ್ ವರದಿ


ಎಂತಹ ವಿಚಿತ್ರ ನೋಡಿ, ಭಾರತದ ಪತ್ರಿಕೆಗಳ ಪಾಲಿಗಾಗಲೇ ಭಯೋತ್ಪಾದಕರಾದವರು ಅಮೆರಿಕಾದ ಪತ್ರಿಕೆಗಳ ಪಾಲಿಗೆ ಗನ್ ಮೆನ್‌ಗಳು, ದಾಳಿಕೋರರು, ಶಂಕಿತ ಕೊಲೆಗಡುಕರು ಅಷ್ಟೆಯಾಗಿದ್ದಾರೆ. ಹಾಗಾಗಿಯೆ ಅಮೆರಿಕಾದ ಪತ್ರಿಕೆಗಳಲ್ಲಿ ಮುಂಬೈ ಘಟನೆಯ ಕುರಿತು ವರದಿ ಮಾಡುವಾಗ ಬಳಸ್ಪಡುತ್ತಿರುವ ಪದ ಪ್ರಯೋಗಗಳಿಗೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವು ಓದುಗರು ಇದಕ್ಕೆ ತೀಕ್ಷ್ಣವಾಗಿಯೆ ತಿರುಗೇಟು ನೀಡಿದ್ದಾರೆ. ಕಸಬ್‌ನಂತವರು ಭಯೋತ್ಪಾದಕರಾಗದೇ ಸ್ವಾತಂತ್ರ್ಯ ಹೋರಾಟಗಾರರಾಗಲೂ ಸಾಧ್ಯವಾ ಎಂದು ಜಾಣ ಓದುಗರೊಬ್ಬರು ನ್ಯೂಯಾರ್ಕ್ ಟೈಮ್ಸ್‌ಗೆ ಪತ್ರ ಬರೆದಿದ್ದಾರೆ.
ಕಸಬ್ ಪ್ರಕರಣ ಕುರಿತು ‘ಲಾಸ್ ಏಂಜಲೀಸ್ ಟೈಮ್ಸ್’ ವರದಿ


ಇದಕ್ಕೆ ಟೈಮ್ಸ್‌ನ ಸಾರ್ವಜನಿಕ ವಿಭಾಗದ ಸಂಪಾದಕರಾಗಿರುವ ಕ್ಲಾರ್ಕ್ ಹೋಐಟ್ ಅಷ್ಟೆ ಜಾಣ್ಮೆಯ ಉತ್ತರವನ್ನು ನೀಡಿದ್ದಾರೆ. ‘ಮುಂಬೈ ದಾಳಿ ನಡೆದ ನಂತರ ಟೈಮ್ಸ್‌ನಲ್ಲಿ ಹಲವು ವರದಿಗಳು ಪ್ರಕಟವಾಗಿವೆ. ಇದರಲ್ಲಿ ವಿಭಿನ್ನ ಪದಗಳನ್ನು ಬಳಸಲಾಗಿದೆ. ನಮಗೆ ಇಂತಹದೆ ಪದಗಳನ್ನು ಬಳಸಬೇಕೆಂಬ ಕಟ್ಟುಪಾಡುಗಳು ಇಲ್ಲ. ಆದರೆ ವರದಿಯಲ್ಲಿ ಬಳಸುವ ಪದಗಳು ಸೂಕ್ಷ್ಮವಾಗಿರಬೇಕು. ಮುಂಬೈ ದಾಳಿ ನಡೆಸಿದವರು ತಮ್ಮನ್ನು ತಾವು ಎಲ್ಲಿಯೂ ಭಯೋತ್ಪಾದಕರು ಎಂದು ಕರೆದುಕೊಂಡಿಲ್ಲ. ಸಹಜವಾಗಿಯೇ ಪತ್ರಿಕೆಗಳು ಭಯೋತ್ಪಾದಕರು ಎಂದು ಇಂತವರನ್ನು ಕರೆದರೆ ಜನ ಸುಲಭವಾಗಿ ನಂಬುತ್ತಾರೆ. ಆದರೆ ರಾಜಕೀಯ, ಧಾರ್ಮಿಕ, ಪ್ರಾದೇಶಿಕವಾದ ಬೇಡಿಕೆಗಳನ್ನಿಟ್ಟುಕೊಂಡು ಜನರ ಮೇಲೆ ದಾಳಿ ಮಾಡುವವರನ್ನು ಏನೆಂದು ಕರೆಯಬೇಕು ಎಂಬುದು ಇನ್ನೂ ಇತ್ಯರ್ಥವಾಗಿಲ್ಲ’ ಎಂದು ಅವರು ತಿಳಿಸಿದ್ದಾರೆ.

ಇವೆಲ್ಲ ಏನೇ ಇರಲಿ, ಆರೋಪಿಗಳಿಗೂ ಅಪರಾಧಿಗಳಿಗೂ ದೊಡ್ಡ ವ್ಯತ್ಯಾಸವಿರುತ್ತದೆ. ಮುಂಬೈ ದಾಳಿಯನ್ನು ಹೊರತು ಪಡಿಸಿ ಹೇಳುವುದಾದರೆ, ಬಹುತೇಕ ಪ್ರಕರಣಗಳಲ್ಲಿ ನಿರಪರಾಧಿಗಳು ಆರೋಪಗಳನ್ನು ಹೊತ್ತಿರುತ್ತಾರೆ. ಆದರೆ ಸುದ್ಧಿ ಮನೆಯಲ್ಲಿರುವವರು ಇಂತಹ ಸೂಕ್ಷ್ಮವನ್ನು ಗಮನಿಸದೆ ಅಪರಾಧ ಸಾಬೀತಾದ ರೀತಿಯಲ್ಲಿ ವರದಿಗಳನ್ನು ಕೀಲಿಸುತ್ತಾರೆ. ಅಮೆರಿಕಾದ ಬಹುತೇಕ ಪತ್ರಿಕೆಗಳು ಮುಂಬೈ ದಾಳಿಯ ಕುರಿತು ಇನ್ನಷ್ಟು ಸಾಕ್ಷ್ಯಾಧಾರಗಳು ಸಿಗದೆ ಘಟನೆಯಲ್ಲಿ ಕಸಬ್‌ನನ್ನು ಆರೋಪಿಯನ್ನಾಗಿ ಮಾಡಲು ಹಿಂದೇಟು ಹಾಕುತ್ತಿವೆ ಎಂಬ ಮಾತಿದೆ.

ಒಟ್ಟಿನಲ್ಲಿ ಕಾಫಿರನ್ನು ಮುಗಿಸಿ ಸ್ವರ್ಗ ಸೇರಲು ಬಂದ ಕಸಬ್ ಎಂಬ ಬಿಸಿ ರಕ್ತದ ಹುಡುಗ ಇವತ್ತು ಪ್ರಪಂಚದ ಸುದ್ಧಿಯ ಸೆಂಟರ್ ಆಫ್- ಸೆನ್ಸೇಶನ್ ಆಗಿದ್ದಾನೆ.

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

‘ಹೆಮ್ಮರ’ ಹಳ್ಳಿ ಶಾಲೆಯ ಮಕ್ಕಳಿಗೆ ವರ! “ಕನ್ನಡಿಗಳನ್ನು ಕಿಟಕಿಗಳಾಗಿ ಪರಿವರ್ತಿಸುವುದೇ ಶಿಕ್ಷಣದ ಬಹುಮುಖ್ಯ ಕರ್ತವ್ಯ” -ಸಿಡ್ನಿ ಜೆ ಹ್ಯಾರಿಸ್. ಭಾರತದಲ್ಲಿ ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿರುವುದು ಪ್ರಾಥಮಿಕ ಶಿಕ್ಷಣ. ಸರಕಾರಿ ಶಾಲೆಗಳಿಗೆ ಹೋಗುವ ಮಕ್ಕಳಿಗೆ ಉತ್ತಮ ಭವಿಷ್ಯ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೂ ಕೆಲವೊಮ್ಮೆ ಹಳ್ಳಿ ಶಾಲೆಗಳಲ್ಲಿ ಕ್ರಿಯಾಶೀಲತೆಯ ಕುಡಿಗಳು ಅರಳುತ್ತವೆ. ಇದು ಭಾರತದಂತಹ ದೇಶದಲ್ಲಿರು ಮತ್ತೊಂದು ಸಾಧ್ಯತೆ. ಸೆಲೆಬ್ರಿಟಿಗಳು ಎಂದು ಕರೆಸಿಕೊಳ್ಳುವ ಬಹುತೇಕ ಮಂದಿ ಹಳ್ಳಿ ಶಾಲೆಗಳಲ್ಲಿ ಕಲಿತು ಬಂದಿರುವುದು ಇದಕ್ಕೆ ಸಾಕ್ಷಿ. ಶಿಕ್ಷಣ ಎನ್ನುವುದು ನಾವು ಕಲಿತದ್ದನ್ನು ಅಧಿಕೃತಗೊಳಿಸುತ್ತದೆ. ಶಿಕ್ಷಕರು ಕೇವಲ ಮಾರ್ಗದರ್ಶನ ನೀಡಬಹುದೇ ಹೊರತು ಅದರಾಚೆಗಿನ ನಿರೀಕ್ಷೆಗಳಿಗೆ ಅವರು ನೀರೆರೆಯಲು ಸಾಧ್ಯವಿಲ್ಲ. ಆದರೆ ಇಂತಹ ಸಣ್ಣ ಮಾರ್ಗದರ್ಶನಗಳು ಸರಕಾರಿ ಶಾಲೆಗಳಲ್ಲಿ ಸಿಗದಿರುವ ಕಾರಣಕ್ಕೆ ಖಾಸಗಿ ಶಾಲೆಗಳ ಮೊರೆ ಹೋಗುವ ಪೊಷಕರು ನಮ್ಮಲ್ಲಿದ್ದಾರೆ. ಸರಕಾರಗಳ ದೂರದೃಷ್ಠಿಯ ಕೊರತೆ, ಸೌಲಭ್ಯಗಳ ಕೊರತೆ ಹಾಗೂ ಶಿಕ್ಷಕರಲ್ಲಿ ಬದ್ದತೆಯ ಕೊರತೆಗಳು ಇಂದು ಭಾರತದ ಪ್ರಾಥಮಿಕ ಶಿಕ್ಷಣದಲ್ಲಿನ ಬಹುಮುಖ್ಯ ಕೊರತೆಗಳು. ಆದರೆ ಇವುಗಳ ನಡುವೆಯೇ ಕುಂ.ವಿ ತರಹದ ಆದರ್ಶ ಶಿಕ್ಷಕರು ಕುಗ್ರಾಮಗಳ ಶಾಲೆಗಳಲ್ಲಿ ಕ್ರಾಂತಿಕಾರಕ ಬದಲಾವಣೆ
ಮಹಾಮಾರಿಯ ಭೀತಿಯಲ್ಲಿದ್ದ ತಲೆಮಾರಿ ಹಾಗೂ ಆಂದ್ರದ ಕುರಿತು ಅಭಿಮಾನ! ಮುಂಜಾನೆ ಹೊರಡುವಾಗ ತಲುಪಲಿದ್ದ ಹಳ್ಳಿಯ ಹೆಸರು ಕೂಡ ಗೊತ್ತಿರಲಿಲ್ಲ. ಸ್ಥಳೀಯ ಎನ್‌ಜಿಒ ಒಂದರ ಸಹಾಯದಿಂದ ’ತಲೆಮಾರಿ’ ಹಳ್ಳಿಗೆ ಹೊರಟಿದ್ದೆವು. ರಾಯಚೂರಿನಿಂದ ಸುಮಾರು ೫೨ ಕಿಮೀ ದೂರದಲ್ಲಿರುವ ತಲೆಮಾರಿ ನಾವು ಕಂಡ ಇತರ ಹಳ್ಳಿಗಳಿಗೆ ಹೋಲಿಸಿದರೆ ಅತಿ ಹೆಚ್ಚು ಹಾನಿಗೊಳಗಾದ ಹಳ್ಳಿ. ನಿಂತ ನೆಲದಿಂದ ಸುಮಾರು ೪೦ ಅಡಿ ಎತ್ತರಕ್ಕೆ ನೆರೆಯ ನೀರು ನುಗ್ಗಿ ಬಂದಿತ್ತಂತೆ. ಅದಕ್ಕೆ ಕುರುವುಗಳಂತೆ ನಾವು ಹೋದಾದ ಅಳಿದುಳಿದ ಮನೆಯ ಗೋಡೆಗಳ ಮೇಲೆ ಕೆಸರು ನೀರಿನ ಕುರುವು ಉಳಿದುಕೊಂಡಿತ್ತು. ತಲೆಮಾರಿಯ ಇನ್ನೊಂದು ವಿಶೇಷ ಎನಪ್ಪಾ ಅಂದ್ರೆ, ರಾಯಚೂರಿನ ಇತರ ನೆರೆ ಪೀಡಿತ ಹಳ್ಳಿಗಳಿಗೆ ಇಲ್ಲಿನ ಜನ ಮಾದರಿಯಾಗಿದ್ದರು. ನೆರೆ ನಿಂತು ಮೂರು ದಿನಗಳದ್ರೂ ಯಾವ ಜನಪ್ರತಿನಿಧಿಗಳು ವಿಚಾರಿಸಿಕೊಳ್ಳಲಿಲ್ಲ ಎಂಬ ಸಿಟ್ಟಿಗೆ ಎಂಎಲ್‌ಎ ಕಾರಿಗೆ ಬೆಂಕಿ ಇಟ್ಟಿದ್ದರು ಹಳ್ಳಿಯ ಜನ. ನಾವು ಹೋದಾಗ ಒಂದು ಪೊಲೀಸ್ ತುಕುಡಿ ಅತಂಕದಿಂದಲೇ ಊರು ಕಾಯುತ್ತಾ ನಿಂತಿತ್ತು. ಸುಟ್ಟು ಕರಕಲಾದ ವಾಹನಗಳು ನೆರೆಯ ಸ್ಮಾರಕಗಳಂತೆ ಉಳಿಸಿಕೊಂಡಿದ್ದರು. ಊರು ತುಂಬ ಸತ್ತ ಎಮ್ಮೆಗಳ ಹೆಣಗಳ ತುಂಬಾ ಹುಳುಗಳು ಮಿಜಿಗುಡುತ್ತಿದ್ದವು. ಮುಂದೆ ಎದುರಾಗಬಹುದಾದ ಮಹಾಮಾರಿಯೊಂದರ ಮುನ್ಸೂಚನೆಯಂತೆ ಊರು ಗಬ್ಬು ವಾಸನೆ ಹೊಡೆಯುತ್ತಿತ್ತು. ಊರೊಳಗೆ ಕಾಲಿಡಲಾಗದಂತೆ ಕೆಸರು ತುಂಬಿಕೊಂಡಿತ್ತು. ಆದರೆ ಬಹುತೇಕರು ತಮ್ಮ ಮನೆಗಳ ಒಳಗೆ ಅಳಿದ
ದೇವೆಂದ್ರ ಎಂಬ ಹಸನ್ಮುಖಿ….! ರಾಯಚೂರು ಮುಗುಸಿ, ಕೊಪ್ಪಳದ ಕೆಲವು ಹಳ್ಳಿಗಳಲ್ಲಿ ಓಡಾಡಿಕೊಂಡು ಸೀದಾ ಹೊರಟಿದ್ದು ಗದಗ ಜಿಲ್ಲೆಗೆ. ಅಲ್ಲಿನ ಕೆಲವು ಗೆಳೆಯರು ಜೊತೆಯಾಗುತ್ತೇವೆ ಎಂದು ಹೇಳಿದ್ದರು ನಾವು ತಲುಪುವ ಹೊತ್ತಿಗೆ ಅವರು ತಮ್ಮದೇ ಕೆಲಸದ ಮೇಲೆ ಹೊರಟು ಹೋಗಿದ್ದರು. ಗದಗ ಜಿಲ್ಲೆಯ ರೋಣ ತಾಲೂಕಿನ ಬಿ.ಎಸ್. ಬೆಲೇರಿ ಎಂಬ ಜಿಲ್ಲಾ ಕೇಂದ್ರದಿಂದ ೫೫ ಕಿ.ಮೀ ದೂರದ ಹಳ್ಳಿಯೊಂದನ್ನು ತಲುಪುವುದೇ ದೊಡ್ಡ ಸಾಹಸದ ಮಾತಾಗಿತ್ತು. ಊರಿಗಿದ್ದ ಒಂದು ಹಳೆಯ ಸೇತುವೆ ಬಿದ್ದು ಹೋಗಿದ್ದರಿಂದ ಹಳ್ಳಿಗೆ ರಸ್ತೆ ಸಂಪರ್ಕವೇ ಇಲ್ಲವಾಗಿತ್ತು. ನಾವು ಹೋಗುವಾಗ ಹೊಳೆಯ ನೀರು ಕಡಿಮೆಯಾಗಿತ್ತು. ಹೊಳೆಯ ವರೆಗೂ ಟಮ್ ಟಮ್ ಎಂದು ಕರೆಯುವ ಆಟೋ ರಿಕ್ಷಾವನ್ನು ಬಾಡಿಗೆಗೆ ಹಿಡಿದು ಅಲ್ಲಿಂದ ಮೂರು ಕಿಮೀ ನಡೆದರೆ ಬೇಲೆರಿ ಸಿಗುತ್ತದೆ. ನಿಂಗು ಬೆಲೇರಿಯಲ್ಲಿ ಪಿಯುಸಿ ಓದಿರುವ ಯುವಕ. ಅಷ್ಟೆ ಅಲ್ಲ ನಿಂಗುಗೆ ಸ್ವಲ್ಪ ರಾಜಕೀಯದ ಗೀಳಿದೆ. ಸ್ಥಳೀಯ ರಾಜಕಾರಣಿಗಳ ಸೋಗಲಾಡಿತನಗಳು ಅನುಭವಕ್ಕೆ ಬಂದಿವೆ. ನಮ್ಮೆದುರು ಆರಂಭದಲ್ಲಿ ನೆರೆಯ ಸುತ್ತಮುತ್ತಲೇ ಮಾತನಾಡಿದ ನಿಂಗು ಮಾತಿನಲ್ಲಿ ಒಂದು ಸಾತ್ವಿಕ ಸಿಟ್ಟಿತ್ತು. ನಿಧಾನವಾಗಿ ಮಾತನಾಡಲು ಆರಂಭಿಸಿ ಕೊನೆಗೆ ಸ್ಥಳೀಯ ಗ್ರಾಮ ಪಂಚಾಯ್ತಿಯಲ್ಲಿ ಮೊದಲು ಬದಲಾವಣೆ ಆಗ್ಬೇಕು, ಹಾಗಾಗಿ ಕೆಲಸಕ್ಕೆ ಗೆಳೆಯರು ಬೆಂಗಳೂರಿಗೆ ಹೋಗೊಣ ಅಂದ್ರು ಇಲ್ಲೇ ಇದ್ದೀನಿ, ಈಗ ನೋಡಿ ನೆರೆ. ಏನಾದ್ರೂ ಒಳ್ಳೆದೂ ಮಾಡ್ಬೇಕು ಅಲ್ವಾ ಎಂದು ಬೆಂಗಳೂರು ಕನ್ನಡದ