ವಿಷಯಕ್ಕೆ ಹೋಗಿ
ಮಂಗಳೂರು ಡೈರಿ. ಭಾಗ-೩

ತೇಜಸ್ವಿ ಜೊತೆ ನಡೆಯದ ಸಂವಾದ
ಪಿಯುಸಿಯ ದಿನಗಳು. ಬಹುಷ ೨೦೦೨ ಇರಬೇಕು. ಅವತ್ತಿಗಾಗಲೇ ಗುಜರಾತ್ ನರಮೇಧ ನಡೆದುಹೊಗಿತ್ತು. ಕರ್ನಾಟಕದ ಬಹುತೇಕ ಬುದ್ದಿಜೀವಿಗಳು ಬಾಬಾಬುಡನ್ ಗಿರಿ ವಿವಾದದಲ್ಲಿ ಸಂಘಪರಿವಾರದ ನಿಲುವನ್ನು ಪ್ರತಿಭಟಿಸಿ ಸುದ್ಧಿಯಲ್ಲಿದ್ದರು. ಆಗಷ್ಟೆ ಹೋರಾಟವೆಂಬ ವಿಸ್ಮಯಕಾರಿ ಜಗತ್ತಿಗೆ ನಾನು ಕಾಲಿಡುತ್ತಿದ್ದ ದಿನಗಳು.


ತೀರ್ಥಹಳ್ಳಿಯಲ್ಲಿ ಪಿಯುಸಿಗೆ ಸೇರಿದ್ದೆ. ಮನೆಯಲ್ಲಿ ಸೈನ್ಸ್ ಕೊಡಿಸಿದ್ದರು. ಮಗ ಮುಂದೆ ಇಂಜಿನಿಯರ್ ಅಥವಾ ಡಾಕ್ಟರ್ ಆಗಲಿ ಎಂಬ ದೂರದ ನಿರೀಕ್ಷೆ ಅಪ್ಪ, ಅಮ್ಮಂಗೆ ಇತ್ತು. ಆದರೆ ನನಗೆ ಪತ್ರಿಕೋದ್ಯಮ ಹುಚ್ಚು ಅಂಟಿಕೊಂಡಿತು. ಅಲ್ಲಿನ ಸ್ಥಳೀಯ ಪತ್ರಿಕೆ ವಿನೂತನ ಮಾತುಕತೆಯಲ್ಲಿ ಸಂಬಳವಿಲ್ಲದ ಕೆಲಸಕ್ಕೆ ಸೇರಿದ್ದೆ. ಆಗ ಇದ್ದದ್ದು ನಾನು ಬರೆಯಬೇಕು, ಹೆಸರು ಮಾಡಬೇಕು ಎಂಬ ಕಲ್ಪನೆಗಳು ಅಷ್ಟೆ. ಆದರೆ ಹೆಚ್ಚು ಕಡಿಮೆ ಅವತ್ತು ನನಗೆ ಗಾಡ್ ಫಾದರ್ ರೂಪದಲ್ಲಿದ್ದ ನೆಂಪೆ ದೇವರಾಜ್ ತೀರ್ಥಹಳ್ಳಿಯಲ್ಲಿ ಸಾಮಾಜಿಕ ಹೋರಾಟಗಳನ್ನು ಸಂಘಟಿಸುತ್ತಿದ್ದರು. ಅವರಿಂದಲೇ ನನಗೆ ಬಾಬಾಬುಡನ್ ಗಿರಿ ವಿವಾದದ ಪರಿಚಯವಾಗಿತ್ತು. ಸಂಘಪರಿವಾರದ ಶಾಲೆಯಲ್ಲಿ ಓದಿ ಬೆಳೆದಿದ್ದರೂ, ಅವತ್ತಿಗಾಗಲೇ ಕುವೆಂಪು, ತೇಜಸ್ವಿ ಬರಹಗಳಿಂದ ಆರೆಸ್ಸೆಸ್‌ನ ಹುಸಿ ದೇಶ ಪ್ರೇಮ ಮೈಬಿಟ್ಟು ಹೋಗಿತ್ತು.

ಚಿಕ್ಕಮಗಳೂರಿನಲ್ಲಿ ಕೋಮು ಸೌಹಾರ್ದ ವೇದಿಕೆಯ ಎರಡನೆ ವರ್ಷದ ಕಾರ್ಯಕ್ರಮ. ತೀರ್ಥಹಳ್ಳಿಯ ಸಹೃದಯರು, ಕೆಲವು ಹಳೆಯ ತಲೆಮಾರಿನ ಹೋರಾಟಗಾರರು ಹಾಗೂ ರೈತ ಸಂಘದವರ ಜೊತೆ ಬಸ್ಸು ಮಾಡಿಕೊಂಡು ಹೋಗುವಾಗಲೇ ನಾನು ಥ್ರಿಲ್ ಆಗಿದ್ದೆ. ಕಾರ್ಯಕ್ರಮ ಅದ್ಭುತವಾಗಿತ್ತು. ಆಂದ್ರದಿಂದ ಗದ್ದರ್ ಬಂದಿದ್ದರು. ಅವತ್ತು ಚಿಕ್ಕಮಂಗಳೂರಿನ ರೋಡ್ ಶೋ ನನಗೆ ಹೊಸ ರೋಮಾಂಚನವನ್ನೇ ಧಾರೆ ಎರೆದಂತೆ ಭಾಸವಾಗಿತ್ತು.

ಸಂಜೆ ಕಾರ್ಯಕ್ರಮ ಮುಗಿಸಿ ಬರುವಾಗ ನಮ್ಮ ಬಸ್ಸಿನಲ್ಲೇ ರಹಮತ್ ತರೀಕೆರೆ ಬಂದಿದ್ದರು. ಅವರು ಮಾರನೆ ದಿನ ಕುಪ್ಪಳ್ಳಿಯಲ್ಲಿ ನಡೆಯಲಿದ್ದ ಕುವೆಂಪು ಜನ್ಮಶತಾಬ್ಧಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ ತೀರ್ಥಹಳ್ಳಿಗೆ ಬರುತ್ತಿದ್ದಾರೆ ಎಂದು ದೇವರಾಜಣ್ಣ ಹೇಳಿದರು.

ನನಗೆ ಅವರನ್ನೆಲ್ಲ ನೋಡುವುದೇ ಹಬ್ಬ. ಮಾತನಾಡಿಸುವ ತವಕ. ಜನರ ಪರವಾಗಿ ಕೆಲಸಮಾಡುತ್ತಿದ್ದೇವೆ ಎಂಬ ಭ್ರಮೆ ಇರುವಾಗ ಇಂಟೆಲೆಕ್ಚುಯಲ್ಸ್‌ಗಳ ಕುರಿತು ಸಹಜವಾಗಿಯೇ ಅಭಿಮಾನ ಬೆಳೆಯುತ್ತದೆ (ಇವತ್ತಿಗೂ ರಹಮತ್ ತರೀಕೆರೆ ವಿಷಯದಲ್ಲಿ ನಿಲುವು ಬದಲಾಗಿಲ್ಲ ಬಿಡಿ).

ಮಾರನೇ ದಿನ ಕುಪ್ಪಳ್ಳಿಯ ಕಾರ್ಯಕ್ರಮಕ್ಕೆ ಹೋದರೆ ದೊಡ್ಡ ಹೆಸರು ಮಾಡಿದವರ ದಂಡು. ಅಗ್ನಿ ಶ್ರೀಧರ್ ಬಂದಿದ್ದರು, ಜೊತೆಗೆ ಅವರ ಹಿಂಬಾಲಕ ಪಡೆ!. ನೋಡುವುದೇ ಖುಷಿ. ಮಧ್ಯಾನದ ಬಿಡುವಿನ ವೇಳೆ ಶ್ರೀದರ್ ಹತ್ತಿರ ಹೋಗಿ "ಚಿಕ್ಕಮಗಳೂರಿನಲ್ಲಿ ನಿಮ್ಮ ಭಾಷಣ ಚೆನ್ನಾಗಿತ್ತು ಸಾರ್" ಎಂದು ಸುಳ್ಳೆ ಹೇಳಿದೆ. ನನಗೆ ಆ ಕ್ಷಣದಲ್ಲಿ ಅವರನ್ನು ಮಾತನಾಡಿಸಲು ಒಂದು ನೆಪ ಬೇಕಿತ್ತು ಅಂತ ಇವತ್ತು ಅನ್ನಿಸುತ್ತದೆ. ಅವರೂ ಖುಷಿ ಆದರು ಮತ್ತು "ಸಂಘಪರಿವಾರದ ಕುರಿತು ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕು, ನಿಮ್ಮಂತ ಯುವಕರು ಮುಂದೆ ಬರುತ್ತಿರುವುದು ನಮಗೂ ಸ್ಪೂರ್ತಿ" ಎಂದರು. ನಾನು ಮತ್ತೂ ಖುಷಿಯಾದೆ.

ಊಟದ ನಂತರ ತೇಜಸ್ವಿಯವರ ಜೊತೆ ಸಂವಾದ ಕಾರ್ಯಕ್ರಮ. ನನಗೆ ತಜಸ್ವಿಯವರ ಕುರಿತು ಅಸಹನೆ. ಅವರ ಬರಹಗಳನ್ನೆಲ್ಲ ಓದಿ ಪ್ರೇರೆಪಿತನಾದ ನಾನು ಹೋರಾಟಕ್ಕೆ ಧುಮುಕಿರುವಾಗ ತೇಜಸ್ವಿಯವರು ಬಾಬಾಬುಡನ್ ಗಿರಿ ವಿವಾದದಲ್ಲಿ ಮುಂಚೂಣಿಗೆ ಬರಲಿಲ್ಲವಲ್ಲ ಎಂಬ ಕೋಪ. ಅವರ ಸಂವಾದ ಪ್ರಾರಂಭವಾಯಿತು. ಮೊದಲು ಯಾರೋ ಪ್ರಶ್ನೇ ಕೇಳಿದರು. "ಸಾರ್ ಕುವೆಂಪು ಮಗನಾಗಿ ಹುಟ್ಟಿದ್ದಕ್ಕೆ ಏನನ್ನಿಸುತ್ತದೆ" ಎಂದು. (ಎಂತಹ ಕೆಲಸಕ್ಕೆ ಬಾರದ ಪ್ರಶ್ನೆ). ಎರಡನೆ ಪ್ರಶ್ನೆ ಕೇಳಲು ನಾನೇ ಮುಂದೆ ಹೋಗಿ ಮೈಕ್ ತೆಗೆದುಕೊಂಡೆ. ಕೈ, ಮೈ, ಎಲ್ಲಾ ಬೆವರುತ್ತಿತ್ತು. ದೈರ್ಯ ತಂದುಕೊಂಡು ಕೇಳಿದೆ, "ಸಾರ್ ನೀವು ಬದುಕುವ ಮೂಡಗೆರೆಯಲ್ಲಿ ಕೋಮು ದಳ್ಳುರಿ ಹೊತ್ತಿ ಉರಿಯುತ್ತಿದ್ದರೆ ನೀವು ಬೆಂಗಳೂರಿನಲ್ಲಿ ಫೋಟೋ ಪ್ರದರ್ಶನ ನಡೆಸುತ್ತಿದ್ದರಲ್ಲ, ಸರಿನಾ?", ಕೇಳೆಬಿಟ್ಟೆ. ಸಭೆ ಮೌನವಾಯಿತು. ಆಗ ನೀವೊಮ್ಮೆ ತೇಜಸ್ವಿಯರನ್ನು ನೋಡಬೇಕಿತ್ತು. ಉಗ್ರಾವತಾರ, ಅವರ ಪಕ್ಕದಲ್ಲಿದ್ದ ಚಕ್ರ ಪ್ರತಿಷ್ಥಾನದ ಶಿವಾ ರೆಡ್ಡಿಯವರಂತೂ ಊರೇ ಮುಳುಗಿ ಹೋದಂತೆ ನನ್ನನ್ನು ವೇದಿಕೆಯಿಂದಲೇ ಬಯ್ಯಲು ಪ್ರಾರಂಭಿಸಿದರು.

ತಕ್ಷಣ ಕೆಲವು ಹೋರಾಟಗಾರರು ನನ್ನ ನೆರವಿಗೆ ಬಂದರು. ವಾದ ವಿವಾದ ಪ್ರಾರಂಭವಾಯಿತು. ಕೊನೆಗೆ ಮುಂದಿನ ಪ್ರಶ್ನೆ ಇಲ್ಲದೆ ತೇಜಸ್ವಿಯವರ ಜೊತೆಗಿನ ಸಂವಾದ ಮುಗಿದು ಹೋಯಿತು. ಟೀ ವಿರಾಮದಲ್ಲಿ ಎಲ್ಲರದೂ ಅದೇ ಚರ್ಚೆ. ನನಗೆ ರಹಮತ್ ಸಿಕ್ಕರು, ಒಳ್ಳೆಯ ಪ್ರಶ್ನೆ, ಆದರೆ ಅದಕ್ಕೆ ಹಾಗೆ ಪ್ರತಿಕ್ರಿಯಿಸಬಾರದಿತ್ತು ಎಂದರು. ನಾನಂತೂ ತುಂಬಾನೆ ಖುಷಿಯಾಗಿದ್ದೆ. ಅದೇ ಖುಷಿಯಲ್ಲಿ ಮುಂದಿನ ವಾರ ವಿನೂತನ ಮಾತುಕತೆಯಲ್ಲಿ ಮುಖಪುಟ ಲೇಖನವನ್ನೂ ಬರೆದೆ. ತೇಜಸ್ವಿಯವರಿಂದ ಶುರು ಮಾಡಿ, ಕುಪ್ಪಳ್ಳಿ ಪ್ರತಿಷ್ಠಾನದ ಸೋಗಲಾಡಿತದವರೆಗೆ ಬರೆದು ಎಲ್ಲರ ಮೆಚ್ಚುಗೆ ಗಳಿಸಿದೆ.

ಇರಲಿ, ನಂತರ ಸಂಜೆ ಕವಿಮನೆಯ ಜಗುಲಿ ಮೇಲೆ ತೇಜಸ್ವಿ ಒಬ್ಬರೆ ಕುಳಿತಿದ್ದರು. ನಾನು ಸುಮ್ಮನೆ ಅವರ ಪಕ್ಕದಲ್ಲಿ ಹೋಗಿ ನಿಂತೆ. ಯಾರ ಮಗನೋ? ಅಂದರು ನಗುತ್ತಾ. ನನ್ನ ಪರಿಚಯ ಮಾಡಿಕೊಂಡೆ. ಓ ನಿಮ್ಮಜ್ಜ ಗೊತ್ತಪ್ಪ. ಅಪ್ಪ ಏನು ಮಾಡುತ್ತಿದ್ದ್ದಾನೆ. ಎಷ್ಟು ಮಕ್ಕಳೋ ನೀವು? ಓದ್ರಿ ಚೆನ್ನಾಗಿ, ಕತೆ-ಗಿತೆ ಬರೀತಿಯಾ? ಎಂದು ಪ್ರೀತಿಯಿಂದ ಮಾತನಾಡಿಸಿದರು. ಮಧ್ಯಾನ ನಡೆದ ಘಟನೆ ಮರೆತಿದ್ದರಾ?.

ತೇಜಸ್ವಿ ಸತ್ತಾಗ ಇವೆಲ್ಲಾ ನೆನಪಾಯಿತು. ಅವತ್ತೇ ಬರೆದು ಬಿಡುವ ಮನಸ್ಸಾಯಿತು. ಆದರೆ ಆಗಿರಲಿಲ್ಲ.

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ದೇವೆಂದ್ರ ಎಂಬ ಹಸನ್ಮುಖಿ….! ರಾಯಚೂರು ಮುಗುಸಿ, ಕೊಪ್ಪಳದ ಕೆಲವು ಹಳ್ಳಿಗಳಲ್ಲಿ ಓಡಾಡಿಕೊಂಡು ಸೀದಾ ಹೊರಟಿದ್ದು ಗದಗ ಜಿಲ್ಲೆಗೆ. ಅಲ್ಲಿನ ಕೆಲವು ಗೆಳೆಯರು ಜೊತೆಯಾಗುತ್ತೇವೆ ಎಂದು ಹೇಳಿದ್ದರು ನಾವು ತಲುಪುವ ಹೊತ್ತಿಗೆ ಅವರು ತಮ್ಮದೇ ಕೆಲಸದ ಮೇಲೆ ಹೊರಟು ಹೋಗಿದ್ದರು. ಗದಗ ಜಿಲ್ಲೆಯ ರೋಣ ತಾಲೂಕಿನ ಬಿ.ಎಸ್. ಬೆಲೇರಿ ಎಂಬ ಜಿಲ್ಲಾ ಕೇಂದ್ರದಿಂದ ೫೫ ಕಿ.ಮೀ ದೂರದ ಹಳ್ಳಿಯೊಂದನ್ನು ತಲುಪುವುದೇ ದೊಡ್ಡ ಸಾಹಸದ ಮಾತಾಗಿತ್ತು. ಊರಿಗಿದ್ದ ಒಂದು ಹಳೆಯ ಸೇತುವೆ ಬಿದ್ದು ಹೋಗಿದ್ದರಿಂದ ಹಳ್ಳಿಗೆ ರಸ್ತೆ ಸಂಪರ್ಕವೇ ಇಲ್ಲವಾಗಿತ್ತು. ನಾವು ಹೋಗುವಾಗ ಹೊಳೆಯ ನೀರು ಕಡಿಮೆಯಾಗಿತ್ತು. ಹೊಳೆಯ ವರೆಗೂ ಟಮ್ ಟಮ್ ಎಂದು ಕರೆಯುವ ಆಟೋ ರಿಕ್ಷಾವನ್ನು ಬಾಡಿಗೆಗೆ ಹಿಡಿದು ಅಲ್ಲಿಂದ ಮೂರು ಕಿಮೀ ನಡೆದರೆ ಬೇಲೆರಿ ಸಿಗುತ್ತದೆ. ನಿಂಗು ಬೆಲೇರಿಯಲ್ಲಿ ಪಿಯುಸಿ ಓದಿರುವ ಯುವಕ. ಅಷ್ಟೆ ಅಲ್ಲ ನಿಂಗುಗೆ ಸ್ವಲ್ಪ ರಾಜಕೀಯದ ಗೀಳಿದೆ. ಸ್ಥಳೀಯ ರಾಜಕಾರಣಿಗಳ ಸೋಗಲಾಡಿತನಗಳು ಅನುಭವಕ್ಕೆ ಬಂದಿವೆ. ನಮ್ಮೆದುರು ಆರಂಭದಲ್ಲಿ ನೆರೆಯ ಸುತ್ತಮುತ್ತಲೇ ಮಾತನಾಡಿದ ನಿಂಗು ಮಾತಿನಲ್ಲಿ ಒಂದು ಸಾತ್ವಿಕ ಸಿಟ್ಟಿತ್ತು. ನಿಧಾನವಾಗಿ ಮಾತನಾಡಲು ಆರಂಭಿಸಿ ಕೊನೆಗೆ ಸ್ಥಳೀಯ ಗ್ರಾಮ ಪಂಚಾಯ್ತಿಯಲ್ಲಿ ಮೊದಲು ಬದಲಾವಣೆ ಆಗ್ಬೇಕು, ಹಾಗಾಗಿ ಕೆಲಸಕ್ಕೆ ಗೆಳೆಯರು ಬೆಂಗಳೂರಿಗೆ ಹೋಗೊಣ ಅಂದ್ರು ಇಲ್ಲೇ ಇದ್ದೀನಿ, ಈಗ ನೋಡಿ ನೆರೆ. ಏನಾದ್ರೂ ಒಳ್ಳೆದೂ ಮಾಡ್ಬೇಕು ಅಲ್ವಾ ಎಂದು ಬೆಂಗಳೂರು ಕನ್ನಡದ
‘ಹೆಮ್ಮರ’ ಹಳ್ಳಿ ಶಾಲೆಯ ಮಕ್ಕಳಿಗೆ ವರ! “ಕನ್ನಡಿಗಳನ್ನು ಕಿಟಕಿಗಳಾಗಿ ಪರಿವರ್ತಿಸುವುದೇ ಶಿಕ್ಷಣದ ಬಹುಮುಖ್ಯ ಕರ್ತವ್ಯ” -ಸಿಡ್ನಿ ಜೆ ಹ್ಯಾರಿಸ್. ಭಾರತದಲ್ಲಿ ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿರುವುದು ಪ್ರಾಥಮಿಕ ಶಿಕ್ಷಣ. ಸರಕಾರಿ ಶಾಲೆಗಳಿಗೆ ಹೋಗುವ ಮಕ್ಕಳಿಗೆ ಉತ್ತಮ ಭವಿಷ್ಯ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೂ ಕೆಲವೊಮ್ಮೆ ಹಳ್ಳಿ ಶಾಲೆಗಳಲ್ಲಿ ಕ್ರಿಯಾಶೀಲತೆಯ ಕುಡಿಗಳು ಅರಳುತ್ತವೆ. ಇದು ಭಾರತದಂತಹ ದೇಶದಲ್ಲಿರು ಮತ್ತೊಂದು ಸಾಧ್ಯತೆ. ಸೆಲೆಬ್ರಿಟಿಗಳು ಎಂದು ಕರೆಸಿಕೊಳ್ಳುವ ಬಹುತೇಕ ಮಂದಿ ಹಳ್ಳಿ ಶಾಲೆಗಳಲ್ಲಿ ಕಲಿತು ಬಂದಿರುವುದು ಇದಕ್ಕೆ ಸಾಕ್ಷಿ. ಶಿಕ್ಷಣ ಎನ್ನುವುದು ನಾವು ಕಲಿತದ್ದನ್ನು ಅಧಿಕೃತಗೊಳಿಸುತ್ತದೆ. ಶಿಕ್ಷಕರು ಕೇವಲ ಮಾರ್ಗದರ್ಶನ ನೀಡಬಹುದೇ ಹೊರತು ಅದರಾಚೆಗಿನ ನಿರೀಕ್ಷೆಗಳಿಗೆ ಅವರು ನೀರೆರೆಯಲು ಸಾಧ್ಯವಿಲ್ಲ. ಆದರೆ ಇಂತಹ ಸಣ್ಣ ಮಾರ್ಗದರ್ಶನಗಳು ಸರಕಾರಿ ಶಾಲೆಗಳಲ್ಲಿ ಸಿಗದಿರುವ ಕಾರಣಕ್ಕೆ ಖಾಸಗಿ ಶಾಲೆಗಳ ಮೊರೆ ಹೋಗುವ ಪೊಷಕರು ನಮ್ಮಲ್ಲಿದ್ದಾರೆ. ಸರಕಾರಗಳ ದೂರದೃಷ್ಠಿಯ ಕೊರತೆ, ಸೌಲಭ್ಯಗಳ ಕೊರತೆ ಹಾಗೂ ಶಿಕ್ಷಕರಲ್ಲಿ ಬದ್ದತೆಯ ಕೊರತೆಗಳು ಇಂದು ಭಾರತದ ಪ್ರಾಥಮಿಕ ಶಿಕ್ಷಣದಲ್ಲಿನ ಬಹುಮುಖ್ಯ ಕೊರತೆಗಳು. ಆದರೆ ಇವುಗಳ ನಡುವೆಯೇ ಕುಂ.ವಿ ತರಹದ ಆದರ್ಶ ಶಿಕ್ಷಕರು ಕುಗ್ರಾಮಗಳ ಶಾಲೆಗಳಲ್ಲಿ ಕ್ರಾಂತಿಕಾರಕ ಬದಲಾವಣೆ
ಮಹಾಮಾರಿಯ ಭೀತಿಯಲ್ಲಿದ್ದ ತಲೆಮಾರಿ ಹಾಗೂ ಆಂದ್ರದ ಕುರಿತು ಅಭಿಮಾನ! ಮುಂಜಾನೆ ಹೊರಡುವಾಗ ತಲುಪಲಿದ್ದ ಹಳ್ಳಿಯ ಹೆಸರು ಕೂಡ ಗೊತ್ತಿರಲಿಲ್ಲ. ಸ್ಥಳೀಯ ಎನ್‌ಜಿಒ ಒಂದರ ಸಹಾಯದಿಂದ ’ತಲೆಮಾರಿ’ ಹಳ್ಳಿಗೆ ಹೊರಟಿದ್ದೆವು. ರಾಯಚೂರಿನಿಂದ ಸುಮಾರು ೫೨ ಕಿಮೀ ದೂರದಲ್ಲಿರುವ ತಲೆಮಾರಿ ನಾವು ಕಂಡ ಇತರ ಹಳ್ಳಿಗಳಿಗೆ ಹೋಲಿಸಿದರೆ ಅತಿ ಹೆಚ್ಚು ಹಾನಿಗೊಳಗಾದ ಹಳ್ಳಿ. ನಿಂತ ನೆಲದಿಂದ ಸುಮಾರು ೪೦ ಅಡಿ ಎತ್ತರಕ್ಕೆ ನೆರೆಯ ನೀರು ನುಗ್ಗಿ ಬಂದಿತ್ತಂತೆ. ಅದಕ್ಕೆ ಕುರುವುಗಳಂತೆ ನಾವು ಹೋದಾದ ಅಳಿದುಳಿದ ಮನೆಯ ಗೋಡೆಗಳ ಮೇಲೆ ಕೆಸರು ನೀರಿನ ಕುರುವು ಉಳಿದುಕೊಂಡಿತ್ತು. ತಲೆಮಾರಿಯ ಇನ್ನೊಂದು ವಿಶೇಷ ಎನಪ್ಪಾ ಅಂದ್ರೆ, ರಾಯಚೂರಿನ ಇತರ ನೆರೆ ಪೀಡಿತ ಹಳ್ಳಿಗಳಿಗೆ ಇಲ್ಲಿನ ಜನ ಮಾದರಿಯಾಗಿದ್ದರು. ನೆರೆ ನಿಂತು ಮೂರು ದಿನಗಳದ್ರೂ ಯಾವ ಜನಪ್ರತಿನಿಧಿಗಳು ವಿಚಾರಿಸಿಕೊಳ್ಳಲಿಲ್ಲ ಎಂಬ ಸಿಟ್ಟಿಗೆ ಎಂಎಲ್‌ಎ ಕಾರಿಗೆ ಬೆಂಕಿ ಇಟ್ಟಿದ್ದರು ಹಳ್ಳಿಯ ಜನ. ನಾವು ಹೋದಾಗ ಒಂದು ಪೊಲೀಸ್ ತುಕುಡಿ ಅತಂಕದಿಂದಲೇ ಊರು ಕಾಯುತ್ತಾ ನಿಂತಿತ್ತು. ಸುಟ್ಟು ಕರಕಲಾದ ವಾಹನಗಳು ನೆರೆಯ ಸ್ಮಾರಕಗಳಂತೆ ಉಳಿಸಿಕೊಂಡಿದ್ದರು. ಊರು ತುಂಬ ಸತ್ತ ಎಮ್ಮೆಗಳ ಹೆಣಗಳ ತುಂಬಾ ಹುಳುಗಳು ಮಿಜಿಗುಡುತ್ತಿದ್ದವು. ಮುಂದೆ ಎದುರಾಗಬಹುದಾದ ಮಹಾಮಾರಿಯೊಂದರ ಮುನ್ಸೂಚನೆಯಂತೆ ಊರು ಗಬ್ಬು ವಾಸನೆ ಹೊಡೆಯುತ್ತಿತ್ತು. ಊರೊಳಗೆ ಕಾಲಿಡಲಾಗದಂತೆ ಕೆಸರು ತುಂಬಿಕೊಂಡಿತ್ತು. ಆದರೆ ಬಹುತೇಕರು ತಮ್ಮ ಮನೆಗಳ ಒಳಗೆ ಅಳಿದ