ವಿಷಯಕ್ಕೆ ಹೋಗಿ
ಕಲ್ಲೂರಿ ಎಂಬ ಸಿನಿಮಾ ನೋಡಿದ್ದೀರಾ...?

ಪ್ರಶಾಂತ್ ಹುಲ್ಕೋಡು

ಸಿನಿಮಾ ಹೇಗಿರಬೇಕು ಎಂದು ನಿರ್ದಿಷ್ಟವಾಗಿ ಹೇಳುವದು ಕಷ್ಟ. ಆದರೆ ಒಳ್ಳೆಯ ಸಿನಿಮಾ ನೋಡುಗನ್ನು ತನ್ನಲ್ಲಿ ಒಂದು ಪಾತ್ರವಾಗಿಸುತ್ತದೆ ಅನ್ನುತ್ತಾರೆ. ಹಾಗಾಗಿಯೆ ಬಾಲಿವುಡ್ ಮಂದಿ ರಿಯಲ್ ಸ್ಟೋರಿಗಳನ್ನು ರೀಲ್‌ನಲ್ಲಿ ತರಲು ಹೆಚ್ಚು ಶ್ರಮವಹಿಸುತ್ತಾರೆ. ಬಾಲಿವುಡ್‌ನಲ್ಲಿಯೂ ಆಂತಹ ಪ್ರಯೋಗಗಳಾಗುತ್ತಿವೆ. ಬದುಕಿಗೆ ಹತ್ತಿರವೆನಿಸುವ ಕತೆಗಳನ್ನು ತೆರೆಗೆ ಅಳವಡಿಸುವುದು ಸುಲಭದ ಕೆಲಸವಲ್ಲ. ಅದಕ್ಕೆ ತನ್ನದೆ ಆದ ಕಮಿಟ್‌ಮೆಂಟ್, ಡೆಡಿಕೇಶನ್ ಇರಬೇಕಾಗುತ್ತದೆ. ಚಿತ್ರದ ನಿರ್ದೇಶಕನಿಗೆ ಅಂತಹ ಸಂವೇದನೆ ಇರದಿದ್ದರೆ ಇಡೀ ಚಿತ್ರ ಹಾಳಾಗಿಬಿಡುತ್ತದೆ.
ಈ ಮಾತಿಗೆ ವಿರುದ್ಧವಾಗಿ ಇತ್ತೀಚೆಗೆ ಬಂದ ತಮಿಳಿನ ಕಲ್ಲೂರಿ ಉತ್ತಮ ಉದಾಹರಣೆ. ಈ ಚಿತ್ರದ ಕುರಿತು ಹೇಳುವ ಮುನ್ನ ನಿಮಗೆ ಇದನ್ನು ತೆರೆಗೆ ತಂದ ನಿರ್ದೇಶಕನ ಶ್ರಮದ ಕುರಿತು ಹೇಳಬೇಕು. ಅದು ಕಲ್ಲೂರಿಗಿಂತಲೂ ಇಂಟೆರಿಸ್ಟಿಂಗ್. ತಮಿಳಿನ ಪ್ರಸಿದ್ಧ ಚಿತ್ರ ಕಾದಲ್ ನೆನಪಿರಬೇಕು ನಿಮಗೆ. ಅಂತರಜಾತಿ ಪ್ರೇಮ ಕತೆಯನ್ನು ಅದ್ಭುತವಾಗಿ ನಿರೂಪಿಸಿದ ಚಿತ್ರ. ಅದರ ನಿರ್ದೇಶಕ ಬಾಲಾಜಿ ಶಕ್ತಿವೇಲು ಕಾದಲ್ ನಂತರ ನಿರ್ದೇಶಿಸಿದ ಚಿತ್ರವೇ ಕಲ್ಲೂರಿ. ತಮಿಳಿನಲ್ಲಿ ಕಲ್ಲೂರಿ ಎಂದರೆ ಕಾಲೇಜು ಎಂದರ್ಥ.
ಕಾದಲ್ ಸೂಪರ್ ಹಿಟ್ ಆದ ನಂತರ ಬಾಲಾಜಿ ಶಕ್ತಿವೇಲು ಮುಂದೆ ನಿರ್ಮಾಪಕರ ದಂಡೇ ನೆರೆದಿತ್ತಂತೆ. ಆದರೆ ಈ ಮಹಾಶಯ ಯಾವುದನ್ನು ಒಪ್ಪಿಕೊಳ್ಳದೆ ಆರ್ಥಿಕವಾಗಿ ಹಿಂದುಳಿದ ತಮಿಳುನಾಡಿನ ದಕ್ಷಿಣ ಭಾಗದ ಸರಕಾರಿ ಕಾಲೇಜೊಂದನ್ನು ಆಯ್ದುಕೊಂಡು ಅಲ್ಲಿನ ವಿಧ್ಯಾರ್ಥಿಗಳ ದಿನಚರಿಯನ್ನು ಅಧ್ಯಯನ ಮಾಡಲಾರಂಭಿಸಿದನು. ಅದಕ್ಕಾಗಿ ಕಾಲೇಜಿನ ಕ್ಯಾಂಟೀನು, ಲೈಬ್ರರಿ, ಕ್ಲಾಸ್ ರೂಂಗಳಲ್ಲಿ ಗುಪ್ತ ಕ್ಯಾಮರಾಗಳನ್ನಿಟ್ಟುದ್ದನಂತೆ. ಕೊನೆಗೆ ಹಳ್ಳಿಗಾಡಿನಿಂದ ಬರುತ್ತಿದ್ದ ವಿಧ್ಯಾರ್ಥಿಗಳ ಕತೆಯನ್ನೇ ಆಧರಿಸಿ ಸಿನಿಮಾಕ್ಕೆ ಸ್ಕ್ರೀನ್ ಪ್ಲೇ ಸಿದ್ಧಪಡಿಸಿದರು ಬಾಲಾಜಿ. ಇನ್ನು ವಿಶೇಷವೆಂದರೆ ಕತೆಗೆ ಪ್ರಮುಖ ಪಾತ್ರಧಾರಿಗಳು ಅಲ್ಲಿನ ವಿಧ್ಯಾರ್ಥಿಗಳೆ ಆಗಿದ್ದರು. ಹೀಗೆ ಸತತ ೪ ವರ್ಷಗಳ ನಂತರ ಕಲ್ಲೂರಿ ಹೊರಬಂತು.
ಇಷ್ಟೆಲ್ಲ ಪುರಾಣ ಏನಕ್ಕೆ ಎಂದರೆ ಸಿನಿಮಾಕ್ಕೆ ಕಾಲ್ಪನಿಕ ಕತೆಗಳನ್ನು ಅನೇಕ ನಿರ್ದೇಶಕರು ಮಾರುಕಟ್ಟೆಯ ಹಿನ್ನಲೆಯಲ್ಲಿಯೆ ಹೆಣೆಯುತ್ತಾರೆ. ಅದರಲ್ಲೂ ನಗರ ಕೇಂದ್ರಿತ ಕತೆಗಳಿಗೆ ಹೆಚ್ಚು ಸ್ಥಾನ ನೀಡುವುದು ಮಾಮೂಲು. ಇದಕ್ಕೆ ವಿರುದ್ಧವಾಗಿ ಕಾಸರವಳ್ಳಿಯಂತವರು ಕಲಾತ್ಮಕ ಚಿತ್ರಗಳಿಗೆ ಮಾರುಹೋಗುತ್ತಾರೆ. ಇದನ್ನು ವಿಚಾರವಂತರು ಎನ್ನಿಸಿಕೊಂಡ ಮಂದಿ ಬಿಟ್ಟರೆ ಮತ್ಯಾರೂ ನೋಡುವುದಿಲ್ಲ ಎಂಬುದು ವ್ಯಂಗ್ಯ. ಕಮರ್ಷಿಯಲ್ ಚಿತ್ರಗಳು ಜನಸಾಮಾನ್ಯರ ಮನ್ನಣೆಗಳಿಸಿಕೊಳ್ಳುತ್ತವೆ. ಮಡಿವಂತರು ಇವುಗಳ ಕುರಿತು ಮೂಗು ಮುರಿದರು ಜನರ ಮೇಲೆ ಇವು ಬೀರುವ ಪ್ರಭಾವ ತೀವ್ರವಾದುದು. ಈ ಮಾತುಗಳನ್ನು ನಾನು ಕನ್ನಡ ಸಿನಿಮಾಲೋಕವನ್ನು ಗಮನದಲ್ಲಿಟ್ಟುಕೊಂಡು ಬರೆಯುತ್ತಿದ್ದೇನೆ.
ಇನ್ನು ಕಲ್ಲೂರಿಯ ವಿಚಾರ. ಶಕ್ತಿವೇಲು ತರದವರು ತಮ್ಮ ಸೊಗಡನ್ನು ಸಿನಿಮಾ ಎಂಬ ಜನಪ್ರಿಯ ಮಾದ್ಯಮದಲ್ಲಿ ತರಲು ಪ್ರಯತ್ನಿಸುವುದು ಒಂದು ಆಶಾದಾಯಕ ಬೆಳವಣಿಗೆ. ಕಲಾತ್ಮಕ ಚಿತ್ರಗಳಿಂದ ನಿಮಗೆ ಪ್ರಶಸ್ತಿಗಳು ಬರಬಹುದು ಅಥವಾ ಸೀಮಿತ ವಲಯಕ್ಕೆ ತಲುಪಬಹುದು. ಅದರೆ ಕಮರ್ಷಿಯಲ್ಲಿ ಮೋಡ್‌ನಲ್ಲಿಯೆ ಸಂವೇಧನಾಶೀಲ ನಿರೂಪಣೆಗಳು ಸಾಧ್ಯವಿರುವಾಗ ಇಂತಹ ಪ್ರಯತ್ನಗಳನ್ನು ಕಾಸರವಳ್ಳಿಯಂತವುರು ಯಾಕೆ ಮಾಡುವುದಿಲ್ಲವೋ ಗೊತ್ತಾಗುತ್ತಿಲ್ಲ.
ಕಲ್ಲೂರಿಯಲ್ಲಿ ಹಳ್ಳಿಗಾಡಿನ ಕಲಾ ಕಾಲೇಜೊಂದರಲ್ಲಿ ಮೂರು ವರ್ಷ ಇತಿಹಾಸ ಕಲಿಯುವ ಹುಡುಗರ ಚಿತ್ರಣವಿದೆ. ಅಲ್ಲಿನ ೯ ಜನ ಸ್ನೇಹಿತರ ನಡುವಿನ ಸಂಬಧಗಳು ಮತ್ತು ಸೂಕ್ಷ್ಮವಾಗಿರುವ ಪ್ರೇಮ ಭಾವನೆಗಳನ್ನು ಹೆಣೆಯಲಾಗಿದೆ. ಸಮಾಜದ ಅಸಮಾನತೆ, ಜಾತಿ ವ್ಯವಸ್ಥೆಗಳ ಕುರಿತು ಸೃಜನಶೀಲ ನಿರೂಪಣೆಯಿದೆ. ಕೊನೆಗೆ ತಮಿಳುನಾಡಿನಲ್ಲಿ ನಡೆದ ರಾಜಕೀಯ ದುರಂತವೊಂದಕ್ಕೆ ರಿಲೇಟ್ ಮಾಡಿ ಕತೆಯನ್ನು ಮುಗಿಸಲಾಗಿದೆ. ಮುಖ್ಯವಾಗಿ ಚಿತ್ರದ ಸಂಭಾಷಣೆ ಹಾಗೂ ಸಂಗೀತ ಕತೆಯ ಸೊಗಡಿಗೆ ಪೂರಕವಾಗಿವೆ. ಎಲ್ಲಿಯೂ ಅನಗತ್ಯ ಹೊಡೆದಾಟಗಳು, ಐಟಂ ಸಾಂಗ್‌ಗಳಿಲ್ಲದ ಸಿನಿಮಾ ಕಲಾತ್ಮಕತೆ ಎಂಬ ಸೋಗಿನಿಂದ ಹೊರಬಂದಿದೆ. ನಾನಿಲ್ಲಿ ನಿಮಗೆ ಕಲ್ಲೂರಿಯ ಕತೆಯನ್ನು ಹೇಳುವುದಿಲ್ಲ. ನೀವೊಮ್ಮೆ ಈ ಸಿನಿಮಾವನ್ನು ನೋಡಬೇಕು. ಚಿತ್ರ ಮುಗಿಯುವ ಹೊತ್ತಿಗೆ ನಿಮ್ಮ ಕಣ್ಣಂಚಿನಲ್ಲಿ ನೀರಿನ ಪೊರೆ ಕಟ್ಟದಿದ್ದರೆ ನನ್ನ ಮೇಲಾಣೆ...
ಕಳೆದ ಎರಡು ವರ್ಷಗಳಿಂದೀಚೆಗೆ ತಮಿಳಿನ ಮುಖ್ಯವಾಹಿನಿಯ ಸಿನಿಮಾದಲ್ಲಿ ಇಂತಹ ಪ್ರಯೋಗಳು ಆಗುತ್ತಿವೆ ಎಂಬುದನ್ನು ಗಮನಿಸಬೇಕು. ಜಾಗತೀಕರಣದ ಯುಗದಲ್ಲಿ ಮೂಲ ಸೊಗಡನ್ನು ಉಳಿಸುವ ಜೊತೆಗೆ ಸಮಾಜದ ಸ್ಥಿತಿಗತಿಗಳನ್ನು ನಿರೂಪಿಸಲು ಬಾಲಾಜಿಯಂತಹ ನಿರ್ದೇಶಕರುಗಳು ಶ್ರಮಿಸಿತ್ತಿರುವುದು ಗಮನಾರ್ಹ. ಮತ್ತೊಂದು ಸಿನಿಮಾ ಪೂ(ಹುವು) ಕೂಡ ಪಟಾಕಿ ಕಾರ್ಖಾನೆಯಲ್ಲಿ ದುಡಿಯುವ ಬಡ ಹುಡುಗಿಯ ಸುತ್ತ ನಿರ್ಮಾಣವಾದ ಪ್ರೇಮ ಕತೆ. ಅತೀ ಸೂಕ್ಷ್ಮವಾಗಿವ ಚಿತ್ರದ ಪ್ರತಿ ಪ್ರೇಂಗಳು ಇಂದಿನ ಕಮರ್ಷಿಯಲ್ಲಿ ಸಿನಿಮಾಗಳಲ್ಲಿ ನಿರೀಕ್ಷಿಸುವುದಕ್ಕಿಂತ ಭಿನ್ನವಾಗಿವೆ. ಸಾಧ್ಯವಾದರೆ ಇಂತಹ ಚಿತ್ರಗಳನ್ನೊಮ್ಮೆ ನೋಡಿ ನಂತರ ನಮ್ಮ ಕಲಾತ್ಮಕ ಚಿತ್ರಗಳನ್ನು ನೋಡಿ. ವ್ಯತ್ಯಾಸ ಮತ್ತು ಅಗತ್ಯ ಹೇಳುವುದಕ್ಕಿಂತ ನಿಮ್ಮ ಅನುಭವಕ್ಕೆ ಬರುತ್ತವೆ.

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ದೇವೆಂದ್ರ ಎಂಬ ಹಸನ್ಮುಖಿ….! ರಾಯಚೂರು ಮುಗುಸಿ, ಕೊಪ್ಪಳದ ಕೆಲವು ಹಳ್ಳಿಗಳಲ್ಲಿ ಓಡಾಡಿಕೊಂಡು ಸೀದಾ ಹೊರಟಿದ್ದು ಗದಗ ಜಿಲ್ಲೆಗೆ. ಅಲ್ಲಿನ ಕೆಲವು ಗೆಳೆಯರು ಜೊತೆಯಾಗುತ್ತೇವೆ ಎಂದು ಹೇಳಿದ್ದರು ನಾವು ತಲುಪುವ ಹೊತ್ತಿಗೆ ಅವರು ತಮ್ಮದೇ ಕೆಲಸದ ಮೇಲೆ ಹೊರಟು ಹೋಗಿದ್ದರು. ಗದಗ ಜಿಲ್ಲೆಯ ರೋಣ ತಾಲೂಕಿನ ಬಿ.ಎಸ್. ಬೆಲೇರಿ ಎಂಬ ಜಿಲ್ಲಾ ಕೇಂದ್ರದಿಂದ ೫೫ ಕಿ.ಮೀ ದೂರದ ಹಳ್ಳಿಯೊಂದನ್ನು ತಲುಪುವುದೇ ದೊಡ್ಡ ಸಾಹಸದ ಮಾತಾಗಿತ್ತು. ಊರಿಗಿದ್ದ ಒಂದು ಹಳೆಯ ಸೇತುವೆ ಬಿದ್ದು ಹೋಗಿದ್ದರಿಂದ ಹಳ್ಳಿಗೆ ರಸ್ತೆ ಸಂಪರ್ಕವೇ ಇಲ್ಲವಾಗಿತ್ತು. ನಾವು ಹೋಗುವಾಗ ಹೊಳೆಯ ನೀರು ಕಡಿಮೆಯಾಗಿತ್ತು. ಹೊಳೆಯ ವರೆಗೂ ಟಮ್ ಟಮ್ ಎಂದು ಕರೆಯುವ ಆಟೋ ರಿಕ್ಷಾವನ್ನು ಬಾಡಿಗೆಗೆ ಹಿಡಿದು ಅಲ್ಲಿಂದ ಮೂರು ಕಿಮೀ ನಡೆದರೆ ಬೇಲೆರಿ ಸಿಗುತ್ತದೆ. ನಿಂಗು ಬೆಲೇರಿಯಲ್ಲಿ ಪಿಯುಸಿ ಓದಿರುವ ಯುವಕ. ಅಷ್ಟೆ ಅಲ್ಲ ನಿಂಗುಗೆ ಸ್ವಲ್ಪ ರಾಜಕೀಯದ ಗೀಳಿದೆ. ಸ್ಥಳೀಯ ರಾಜಕಾರಣಿಗಳ ಸೋಗಲಾಡಿತನಗಳು ಅನುಭವಕ್ಕೆ ಬಂದಿವೆ. ನಮ್ಮೆದುರು ಆರಂಭದಲ್ಲಿ ನೆರೆಯ ಸುತ್ತಮುತ್ತಲೇ ಮಾತನಾಡಿದ ನಿಂಗು ಮಾತಿನಲ್ಲಿ ಒಂದು ಸಾತ್ವಿಕ ಸಿಟ್ಟಿತ್ತು. ನಿಧಾನವಾಗಿ ಮಾತನಾಡಲು ಆರಂಭಿಸಿ ಕೊನೆಗೆ ಸ್ಥಳೀಯ ಗ್ರಾಮ ಪಂಚಾಯ್ತಿಯಲ್ಲಿ ಮೊದಲು ಬದಲಾವಣೆ ಆಗ್ಬೇಕು, ಹಾಗಾಗಿ ಕೆಲಸಕ್ಕೆ ಗೆಳೆಯರು ಬೆಂಗಳೂರಿಗೆ ಹೋಗೊಣ ಅಂದ್ರು ಇಲ್ಲೇ ಇದ್ದೀನಿ, ಈಗ ನೋಡಿ ನೆರೆ. ಏನಾದ್ರೂ ಒಳ್ಳೆದೂ ಮಾಡ್ಬೇಕು ಅಲ್ವಾ ಎಂದು ಬೆಂಗಳೂರು ಕನ್ನಡದ
‘ಹೆಮ್ಮರ’ ಹಳ್ಳಿ ಶಾಲೆಯ ಮಕ್ಕಳಿಗೆ ವರ! “ಕನ್ನಡಿಗಳನ್ನು ಕಿಟಕಿಗಳಾಗಿ ಪರಿವರ್ತಿಸುವುದೇ ಶಿಕ್ಷಣದ ಬಹುಮುಖ್ಯ ಕರ್ತವ್ಯ” -ಸಿಡ್ನಿ ಜೆ ಹ್ಯಾರಿಸ್. ಭಾರತದಲ್ಲಿ ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿರುವುದು ಪ್ರಾಥಮಿಕ ಶಿಕ್ಷಣ. ಸರಕಾರಿ ಶಾಲೆಗಳಿಗೆ ಹೋಗುವ ಮಕ್ಕಳಿಗೆ ಉತ್ತಮ ಭವಿಷ್ಯ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೂ ಕೆಲವೊಮ್ಮೆ ಹಳ್ಳಿ ಶಾಲೆಗಳಲ್ಲಿ ಕ್ರಿಯಾಶೀಲತೆಯ ಕುಡಿಗಳು ಅರಳುತ್ತವೆ. ಇದು ಭಾರತದಂತಹ ದೇಶದಲ್ಲಿರು ಮತ್ತೊಂದು ಸಾಧ್ಯತೆ. ಸೆಲೆಬ್ರಿಟಿಗಳು ಎಂದು ಕರೆಸಿಕೊಳ್ಳುವ ಬಹುತೇಕ ಮಂದಿ ಹಳ್ಳಿ ಶಾಲೆಗಳಲ್ಲಿ ಕಲಿತು ಬಂದಿರುವುದು ಇದಕ್ಕೆ ಸಾಕ್ಷಿ. ಶಿಕ್ಷಣ ಎನ್ನುವುದು ನಾವು ಕಲಿತದ್ದನ್ನು ಅಧಿಕೃತಗೊಳಿಸುತ್ತದೆ. ಶಿಕ್ಷಕರು ಕೇವಲ ಮಾರ್ಗದರ್ಶನ ನೀಡಬಹುದೇ ಹೊರತು ಅದರಾಚೆಗಿನ ನಿರೀಕ್ಷೆಗಳಿಗೆ ಅವರು ನೀರೆರೆಯಲು ಸಾಧ್ಯವಿಲ್ಲ. ಆದರೆ ಇಂತಹ ಸಣ್ಣ ಮಾರ್ಗದರ್ಶನಗಳು ಸರಕಾರಿ ಶಾಲೆಗಳಲ್ಲಿ ಸಿಗದಿರುವ ಕಾರಣಕ್ಕೆ ಖಾಸಗಿ ಶಾಲೆಗಳ ಮೊರೆ ಹೋಗುವ ಪೊಷಕರು ನಮ್ಮಲ್ಲಿದ್ದಾರೆ. ಸರಕಾರಗಳ ದೂರದೃಷ್ಠಿಯ ಕೊರತೆ, ಸೌಲಭ್ಯಗಳ ಕೊರತೆ ಹಾಗೂ ಶಿಕ್ಷಕರಲ್ಲಿ ಬದ್ದತೆಯ ಕೊರತೆಗಳು ಇಂದು ಭಾರತದ ಪ್ರಾಥಮಿಕ ಶಿಕ್ಷಣದಲ್ಲಿನ ಬಹುಮುಖ್ಯ ಕೊರತೆಗಳು. ಆದರೆ ಇವುಗಳ ನಡುವೆಯೇ ಕುಂ.ವಿ ತರಹದ ಆದರ್ಶ ಶಿಕ್ಷಕರು ಕುಗ್ರಾಮಗಳ ಶಾಲೆಗಳಲ್ಲಿ ಕ್ರಾಂತಿಕಾರಕ ಬದಲಾವಣೆ
ಮಹಾಮಾರಿಯ ಭೀತಿಯಲ್ಲಿದ್ದ ತಲೆಮಾರಿ ಹಾಗೂ ಆಂದ್ರದ ಕುರಿತು ಅಭಿಮಾನ! ಮುಂಜಾನೆ ಹೊರಡುವಾಗ ತಲುಪಲಿದ್ದ ಹಳ್ಳಿಯ ಹೆಸರು ಕೂಡ ಗೊತ್ತಿರಲಿಲ್ಲ. ಸ್ಥಳೀಯ ಎನ್‌ಜಿಒ ಒಂದರ ಸಹಾಯದಿಂದ ’ತಲೆಮಾರಿ’ ಹಳ್ಳಿಗೆ ಹೊರಟಿದ್ದೆವು. ರಾಯಚೂರಿನಿಂದ ಸುಮಾರು ೫೨ ಕಿಮೀ ದೂರದಲ್ಲಿರುವ ತಲೆಮಾರಿ ನಾವು ಕಂಡ ಇತರ ಹಳ್ಳಿಗಳಿಗೆ ಹೋಲಿಸಿದರೆ ಅತಿ ಹೆಚ್ಚು ಹಾನಿಗೊಳಗಾದ ಹಳ್ಳಿ. ನಿಂತ ನೆಲದಿಂದ ಸುಮಾರು ೪೦ ಅಡಿ ಎತ್ತರಕ್ಕೆ ನೆರೆಯ ನೀರು ನುಗ್ಗಿ ಬಂದಿತ್ತಂತೆ. ಅದಕ್ಕೆ ಕುರುವುಗಳಂತೆ ನಾವು ಹೋದಾದ ಅಳಿದುಳಿದ ಮನೆಯ ಗೋಡೆಗಳ ಮೇಲೆ ಕೆಸರು ನೀರಿನ ಕುರುವು ಉಳಿದುಕೊಂಡಿತ್ತು. ತಲೆಮಾರಿಯ ಇನ್ನೊಂದು ವಿಶೇಷ ಎನಪ್ಪಾ ಅಂದ್ರೆ, ರಾಯಚೂರಿನ ಇತರ ನೆರೆ ಪೀಡಿತ ಹಳ್ಳಿಗಳಿಗೆ ಇಲ್ಲಿನ ಜನ ಮಾದರಿಯಾಗಿದ್ದರು. ನೆರೆ ನಿಂತು ಮೂರು ದಿನಗಳದ್ರೂ ಯಾವ ಜನಪ್ರತಿನಿಧಿಗಳು ವಿಚಾರಿಸಿಕೊಳ್ಳಲಿಲ್ಲ ಎಂಬ ಸಿಟ್ಟಿಗೆ ಎಂಎಲ್‌ಎ ಕಾರಿಗೆ ಬೆಂಕಿ ಇಟ್ಟಿದ್ದರು ಹಳ್ಳಿಯ ಜನ. ನಾವು ಹೋದಾಗ ಒಂದು ಪೊಲೀಸ್ ತುಕುಡಿ ಅತಂಕದಿಂದಲೇ ಊರು ಕಾಯುತ್ತಾ ನಿಂತಿತ್ತು. ಸುಟ್ಟು ಕರಕಲಾದ ವಾಹನಗಳು ನೆರೆಯ ಸ್ಮಾರಕಗಳಂತೆ ಉಳಿಸಿಕೊಂಡಿದ್ದರು. ಊರು ತುಂಬ ಸತ್ತ ಎಮ್ಮೆಗಳ ಹೆಣಗಳ ತುಂಬಾ ಹುಳುಗಳು ಮಿಜಿಗುಡುತ್ತಿದ್ದವು. ಮುಂದೆ ಎದುರಾಗಬಹುದಾದ ಮಹಾಮಾರಿಯೊಂದರ ಮುನ್ಸೂಚನೆಯಂತೆ ಊರು ಗಬ್ಬು ವಾಸನೆ ಹೊಡೆಯುತ್ತಿತ್ತು. ಊರೊಳಗೆ ಕಾಲಿಡಲಾಗದಂತೆ ಕೆಸರು ತುಂಬಿಕೊಂಡಿತ್ತು. ಆದರೆ ಬಹುತೇಕರು ತಮ್ಮ ಮನೆಗಳ ಒಳಗೆ ಅಳಿದ