ವಿಷಯಕ್ಕೆ ಹೋಗಿ
ದೇವೆಂದ್ರ ಎಂಬ ಹಸನ್ಮುಖಿ….!

ರಾಯಚೂರು ಮುಗುಸಿ, ಕೊಪ್ಪಳದ ಕೆಲವು ಹಳ್ಳಿಗಳಲ್ಲಿ ಓಡಾಡಿಕೊಂಡು ಸೀದಾ ಹೊರಟಿದ್ದು ಗದಗ ಜಿಲ್ಲೆಗೆ. ಅಲ್ಲಿನ ಕೆಲವು ಗೆಳೆಯರು ಜೊತೆಯಾಗುತ್ತೇವೆ ಎಂದು ಹೇಳಿದ್ದರು ನಾವು ತಲುಪುವ ಹೊತ್ತಿಗೆ ಅವರು ತಮ್ಮದೇ ಕೆಲಸದ ಮೇಲೆ ಹೊರಟು ಹೋಗಿದ್ದರು.

ಗದಗ ಜಿಲ್ಲೆಯ ರೋಣ ತಾಲೂಕಿನ ಬಿ.ಎಸ್. ಬೆಲೇರಿ ಎಂಬ ಜಿಲ್ಲಾ ಕೇಂದ್ರದಿಂದ ೫೫ ಕಿ.ಮೀ ದೂರದ ಹಳ್ಳಿಯೊಂದನ್ನು ತಲುಪುವುದೇ ದೊಡ್ಡ ಸಾಹಸದ ಮಾತಾಗಿತ್ತು. ಊರಿಗಿದ್ದ ಒಂದು ಹಳೆಯ ಸೇತುವೆ ಬಿದ್ದು ಹೋಗಿದ್ದರಿಂದ ಹಳ್ಳಿಗೆ ರಸ್ತೆ ಸಂಪರ್ಕವೇ ಇಲ್ಲವಾಗಿತ್ತು. ನಾವು ಹೋಗುವಾಗ ಹೊಳೆಯ ನೀರು ಕಡಿಮೆಯಾಗಿತ್ತು. ಹೊಳೆಯ ವರೆಗೂ ಟಮ್ ಟಮ್ ಎಂದು ಕರೆಯುವ ಆಟೋ ರಿಕ್ಷಾವನ್ನು ಬಾಡಿಗೆಗೆ ಹಿಡಿದು ಅಲ್ಲಿಂದ ಮೂರು ಕಿಮೀ ನಡೆದರೆ ಬೇಲೆರಿ ಸಿಗುತ್ತದೆ.


ನಿಂಗು ಬೆಲೇರಿಯಲ್ಲಿ ಪಿಯುಸಿ ಓದಿರುವ ಯುವಕ. ಅಷ್ಟೆ ಅಲ್ಲ ನಿಂಗುಗೆ ಸ್ವಲ್ಪ ರಾಜಕೀಯದ ಗೀಳಿದೆ. ಸ್ಥಳೀಯ ರಾಜಕಾರಣಿಗಳ ಸೋಗಲಾಡಿತನಗಳು ಅನುಭವಕ್ಕೆ ಬಂದಿವೆ. ನಮ್ಮೆದುರು ಆರಂಭದಲ್ಲಿ ನೆರೆಯ ಸುತ್ತಮುತ್ತಲೇ ಮಾತನಾಡಿದ ನಿಂಗು ಮಾತಿನಲ್ಲಿ ಒಂದು ಸಾತ್ವಿಕ ಸಿಟ್ಟಿತ್ತು. ನಿಧಾನವಾಗಿ ಮಾತನಾಡಲು ಆರಂಭಿಸಿ ಕೊನೆಗೆ ಸ್ಥಳೀಯ ಗ್ರಾಮ ಪಂಚಾಯ್ತಿಯಲ್ಲಿ ಮೊದಲು ಬದಲಾವಣೆ ಆಗ್ಬೇಕು, ಹಾಗಾಗಿ ಕೆಲಸಕ್ಕೆ ಗೆಳೆಯರು ಬೆಂಗಳೂರಿಗೆ ಹೋಗೊಣ ಅಂದ್ರು ಇಲ್ಲೇ ಇದ್ದೀನಿ, ಈಗ ನೋಡಿ ನೆರೆ. ಏನಾದ್ರೂ ಒಳ್ಳೆದೂ ಮಾಡ್ಬೇಕು ಅಲ್ವಾ ಎಂದು ಬೆಂಗಳೂರು ಕನ್ನಡದಲ್ಲಿ ಮಾತನಾಡುತ್ತಿದ್ದ ನಿಂಗು ಉತ್ತರ ಕರ್ನಾಟಕದ ಆಶಾಕಿರಣದಂತೆ ಕಾಣುತ್ತಿದ್ದದ್ದು ಆಶ್ಚರ್ಯವೇನಿಲ್ಲ ಬಿಡಿ.

ಇದು ನಮ್ಮ ೨ ದಿನಗಳ ಗೆಳೆಯ ಹಾಗೂ ಟಮ್ ಟಮ್ ಓಡಿಸುತ್ತಿದ್ದ ದೇವೆಂದ್ರನ ಕುರಿತು ಹೇಳಲೇಬೆಕೆಂದಿರುವ ನೆನಪುಗಳು. ಹಳ್ಳಿಗೆ ಹೋಗಲು ಟಮ್ ಟಮ್ ಕೇಳಿದಾಗ ಪ್ರತಿಯೊಬ್ಬರಿಗೂ ನಮ್ಮನ್ನು ಸುಲಿಯುವ ಇರಾದೆ. ಸಹಜವಾಗಿಯೇ ಸ್ವಲ್ಪ ಕಡಿಮೆ ಮಾಡ್ಕೊಳ್ಳಿ ಅಂತ ನನ್ನ ಜೊತೆಗಿದ್ದ ಗೆಳೆಯರು ಕೇಳಿಕೊಳ್ಳುತ್ತಿದ್ದರು. ಆಗ ಸಿಕ್ಕಿದ್ದು ದೇವೆಂದ್ರ. ನಮ್ಮ ಅನುಕೂಲಕ್ಕೆ ಸ್ವಲ್ಪ ಹೆಚ್ಚು ಕಡಿಮೆ ಕೊಟ್ರೂ ಪರವಾಗಿಲ್ಲ ಬಿಡಿ ಎಂದು ಗಾಡಿ ತಂದು ಎದುರು ನಿಲ್ಲಿಸಿದ್ದ.



ಆ ನಂತರ ನಾವು ಬಾದಾಮಿ ತಲುಪಿ ಅಲ್ಲಿ ಒಂದು ದಿನ ಕಳೆಯುವವರೆಗೂ ಜೊತೆಗಿದ್ದ ದೇವೆಂದ್ರನ ನೆನಪುಗಳೇಕೊ ಮರೆಯಾಗುತ್ತಿಲ್ಲ. ಇವತ್ತಲ್ಲಾ ನಾಳೆ ಅವನು ಫೋನು ಮಾಡಬಹುದೇನೋ ಎಂಬ ಕಾತರತೆಯಿಂದಲೇ ಕಾಯುತ್ತಿದ್ದೇನೆ.
ದೇವೆಂದ್ರನ ಮನೆಯಲ್ಲಿ ಐವರು ಮಕ್ಕಳು. ದೊಡ್ಡ ಅಣ್ಣ ದೂರವಾಗಿದ್ದಾರೆ. ಅಕ್ಕಂದಿರ ಮದುವೆಯಾಗಿದೆ. ತಂಗಿಯರಿಬ್ಬರು ಮದುವೆಗಿದ್ದಾರೆ. ಅಪ್ಪ ಪೊಲೀಸ್ ಆಗಿದ್ದವರು ನಿವೃತ್ತರಾಗಿ ಹಲವು ವರ್ಷಗಳಾಗಿವೆ. ಮನೆ ತುಂಬಾ ಕಷ್ಟವಿದೆ, ಆದರೆ ನಮ್ಮ ಜೊತೆಗಿದ್ದ ಪ್ರತಿ ಕ್ಷಣವೂ ನಮಗೆ ಕಾಣಿಸಿದ್ದು ಅವನ ನಗುಮುಖ ಮಾತ್ರ.

ಹೋಳೆಹಡಗಲಿಯಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ನಿರಾಶ್ರಿತ ಶೆಡ್‌ಗಳನ್ನು ನೋಡಲು ಹೋದಾಗ ಯಾರೊ ಬಂದು ಬಟ್ಟೆ ಹಂಚುತ್ತಿದ್ದರು. ’ಭಯ್ಯಾ ನಾನೊಂದು ತಗೊಳ್ಳೇನ್ರೀ’ ಎಂದವನೆ ಹೋಗಿ ಒಂದೆರಡು ಬಟ್ಟೆ ತೆಗೆದುಕೊಂದು ಬಂದು ಟಮ್ ಟಮ್ ಒಳಗಿಟ್ಟ. ನಮ್ಮ ಜೊತೆಗಿದ್ದವರೊಬ್ಬರು ’ಅಲ್ಲಪ್ಪ, ಅದು ನೆರೆಯಲ್ಲಿ ಬಟ್ಟೆ ಕಳೆದುಕೊಂಡವರಿಗೆ ತಂದಿದ್ದು ಅಲ್ಲವಾ’ ಎಂದರು. ’ಭಯ್ಯಾ ನಂಗೆ ಬಟ್ಟೆ ಇಲ್ರೀ, ನೆರೆ ನಮ್ಮೇನೇಗು ನುಗ್ಗಿತ್ರೀ’ ಎಂದು ನಗತೊಡಗಿತು. ನಾವು ಹೋದ ಊರುಗಳಲ್ಲಿ ನಮಗಿಂತ ಮುಂಚೆ ಜನರನ್ನು ಮಾತನಾಡಿಸಿ ಹತ್ತಿರ ತಂದುಕೊಳ್ಳುತ್ತಿದ್ದ ದೇವೆಂದ್ರ ಮುಗ್ದತೆ ಮಾತ್ರ ವಿವರಿಸಲು ಅಸಾದ್ಯವಾದುದ್ದು.

ಬಾದಾಮಿ ಸುತ್ತ ಮುತ್ತ ಓಡಾಟ ಮುಗಿಸಿ ಹೊರಡುವ ಸಮಯ.’ಭಯ್ಯಾ ನಿಮ್ ಜೊತೆ ಬರಲ್ಲೇನ್ರೀ’ ಎಂದ. ಬಾದಾಮಿ ಹೆದ್ದಾರಿಯಲ್ಲಿ ನನ್ನ ಕೈಗೆ ಟಮ್ ಟಮ್ ಕೊಟ್ಟು ’ಸ್ವಲ್ಪ ದೂರ ಓಡಿಸ್ರೀ ಭಯ್ಯಾ’ ಅಂದ. ಸ್ವಲ್ಪ ದೂರ ಹೋಗುತ್ತಿದ್ದಂತೆ ’ಒಂದೆರಡು ದಿನ ಓಡ್ಸಿದ್ರೆ ಸಾಕು, ಚೆನ್ನಾಗಿ ಒಡ್ಸೀತ್ತೀರಾ ಭಯ್ಯಾ’ ಎಂಬ ಕಾಂಪ್ಲಿಮೆಂಟ್ ಕೊಟ್ಟ. ಸುಮ್ಮನೆ ನಗಾಡಿದೆ.
ಹೋಟೆಲ್ ಹತ್ತಿರ ಬರುವಾಗ ಮಳೆ ಆರಂಭವಾಗಿತ್ತು. ಎಲ್ಲರೂ ಟಮ್ ಟಮ್ ಬಿಟ್ಟು ಹೋಟೆಲ್ ಹೊಕ್ಕೆವು. ಜೊತೆಗೆ ದೇವೆಂದ್ರ ಕೂಡ. ಅಷ್ಟೊತ್ತಿಗೆ ಟಮ್ ಟಮ್‌ನ ಮಾಲೀಕ ಬಂದು ದೇವೆಂದ್ರನ ಹತ್ತಿರ ಇದ್ದ ದಿನದ ಬಾಡಿಗೆ ಕಿತ್ತುಕೊಂಡು, ಆಟೋವನ್ನು ಕಿತ್ತುಕೊಂಡು ಹೊರಟು ಹೋದ.

ಆದರೂ ನಗುತ್ತಲೇ ಇದ್ದ ದೇವೆಂದ್ರ ಮುಖ ನೋಡಿದೆ. ಒಳಗೆ ಒಂಥರದ ವಿಷಾದ ತುಂಬಿದ ಹಾಗಿತ್ತು. ’ನಮ್ಮ ಜೊತೆ ಬಂದು ಬಿಡು. ಏನಾದ್ರೂ ಆಗುತ್ತದೆ’ ಎಂದೆ. ’ಬಿಡ್ರೀ ಭಯ್ಯಾ, ಇವನಿಲ್ಲ ಅಂದ್ರ ಮತ್ತೊಬ್ಬ ಸಿಗ್ತಾನೆ. ನೀವು ಮನೆಗೆ ಬರತ್ತೀನಿ ಅಂದಿದ್ರೀ’ ಎಂದು ಮಾತು ಹೊರಳಿಸಿದ.

’ಕೈಗೆ ಫೋನ್ ನಂಬರು ಬರೆದುಕೊಟ್ಟು ಬಾಡಿಗೆ ಕೊಟ್ಟು ಪೋನು ಮಾಡು, ಕಾಯ್ತಿರ್ತೀನಿ’ ಎಂದು ಹೊರಬಂದೆ. ಯಾಕೋ ಬೇಸರ ಮುತ್ತಿಕೊಂಡಿತು. ಯಾರ ಜೊತೆಯೂ ಮಾತನಾಡದೆ ಇಳಕಲ್ಲಿನ ಬಸ್ಸಿನಲ್ಲಿ ದೇವೆಂದ್ರನ ಕುರಿತು ಯೋಚಿಸಿತ್ತಾ ನಿದ್ದೆ ಹೋದೆ.
ಈಗಲೂ ಫೋನು ರಿಂಗಾದರೆ ದೇವೆಂದ್ರ ಇರಬಹುದಾ ಎಂದು ನೋಡುತ್ತೇನೆ. ’ಅತ್ತ ಕಡೆಯಿಂದ “ಭಯ್ಯಾ” ಎಂಬ ದನಿ ಮಾತ್ರ ಕೇಳುತ್ತಿಲ್ಲ.

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಲ್ಲೂರಿ ಎಂಬ ಸಿನಿಮಾ ನೋಡಿದ್ದೀರಾ...? ಪ್ರಶಾಂತ್ ಹುಲ್ಕೋಡು ಸಿನಿಮಾ ಹೇಗಿರಬೇಕು ಎಂದು ನಿರ್ದಿಷ್ಟವಾಗಿ ಹೇಳುವದು ಕಷ್ಟ. ಆದರೆ ಒಳ್ಳೆಯ ಸಿನಿಮಾ ನೋಡುಗನ್ನು ತನ್ನಲ್ಲಿ ಒಂದು ಪಾತ್ರವಾಗಿಸುತ್ತದೆ ಅನ್ನುತ್ತಾರೆ. ಹಾಗಾಗಿಯೆ ಬಾಲಿವುಡ್ ಮಂದಿ ರಿಯಲ್ ಸ್ಟೋರಿಗಳನ್ನು ರೀಲ್‌ನಲ್ಲಿ ತರಲು ಹೆಚ್ಚು ಶ್ರಮವಹಿಸುತ್ತಾರೆ. ಬಾಲಿವುಡ್‌ನಲ್ಲಿಯೂ ಆಂತಹ ಪ್ರಯೋಗಗಳಾಗುತ್ತಿವೆ. ಬದುಕಿಗೆ ಹತ್ತಿರವೆನಿಸುವ ಕತೆಗಳನ್ನು ತೆರೆಗೆ ಅಳವಡಿಸುವುದು ಸುಲಭದ ಕೆಲಸವಲ್ಲ. ಅದಕ್ಕೆ ತನ್ನದೆ ಆದ ಕಮಿಟ್‌ಮೆಂಟ್, ಡೆಡಿಕೇಶನ್ ಇರಬೇಕಾಗುತ್ತದೆ. ಚಿತ್ರದ ನಿರ್ದೇಶಕನಿಗೆ ಅಂತಹ ಸಂವೇದನೆ ಇರದಿದ್ದರೆ ಇಡೀ ಚಿತ್ರ ಹಾಳಾಗಿಬಿಡುತ್ತದೆ. ಈ ಮಾತಿಗೆ ವಿರುದ್ಧವಾಗಿ ಇತ್ತೀಚೆಗೆ ಬಂದ ತಮಿಳಿನ ಕಲ್ಲೂರಿ ಉತ್ತಮ ಉದಾಹರಣೆ. ಈ ಚಿತ್ರದ ಕುರಿತು ಹೇಳುವ ಮುನ್ನ ನಿಮಗೆ ಇದನ್ನು ತೆರೆಗೆ ತಂದ ನಿರ್ದೇಶಕನ ಶ್ರಮದ ಕುರಿತು ಹೇಳಬೇಕು. ಅದು ಕಲ್ಲೂರಿಗಿಂತ ಲೂ ಇಂಟೆರಿಸ್ಟಿಂಗ್. ತಮಿಳಿನ ಪ್ರಸಿದ್ಧ ಚಿತ್ರ ಕಾದಲ್ ನೆನಪಿರಬೇಕು ನಿಮಗೆ. ಅಂತರಜಾತಿ ಪ್ರೇಮ ಕತೆಯನ್ನು ಅದ್ಭುತವಾಗಿ ನಿರೂಪಿಸಿದ ಚಿತ್ರ. ಅದರ ನಿರ್ದೇಶಕ ಬಾಲಾಜಿ ಶಕ್ತಿವೇಲು ಕಾದಲ್ ನಂತರ ನಿರ್ದೇಶಿಸಿದ ಚಿತ್ರವೇ ಕಲ್ಲೂರಿ. ತಮಿಳಿನಲ್ಲಿ ಕಲ್ಲೂರಿ ಎಂದರೆ ಕಾಲೇಜು ಎಂದರ್ಥ. ಕಾದಲ್ ಸೂಪರ್ ಹಿಟ್ ಆದ ನಂತರ ಬಾಲಾಜಿ ಶಕ್ತಿವೇಲು ಮುಂದೆ ನಿರ್ಮಾಪಕರ ದಂಡೇ ನೆರೆದಿತ್ತಂತೆ. ಆದರೆ ಈ ಮಹಾಶಯ ಯಾವುದನ್ನು ಒಪ್ಪಿಕೊಳ್ಳದೆ ಆರ್ಥಿಕ...

'ಕನಸಿನ ಎಡಿಟರ್'!

ಯುವ ಪತ್ರಕರ್ತನ 'ಕನಸಿನ ಎಡಿಟರ್' ಒಂದು ಸುಳಿವನ್ನೂ ಕೊಡದೆ ಕಣ್ಮರೆಯಾಗಿದ್ದಾರೆ! ಇ. ರಾಘವನ್ ಕೈಗೆ ಆಯುಧ ಕೊಟ್ಟು, ರಣ ಬಿಸಿಲಿನ ಮೈದಾನದ ನಡುವೆ, ಶತ್ರುವನ್ನು ಗುರಿಇಟ್ಟು ತೋರಿಸಿ, ಮರೆಯಲ್ಲಿ ನಿಂತು ಮುಗುಳ್ನುಗುತ್ತಿದ್ದ ಭಾವ ಹಠಾತ್ ಗೊಂದಲಕ್ಕೀಡಾಗಿದೆ. ಒಂದು ವರ್ಷಕ್ಕೂ ಕಡಿಮೆ ಅವಧಿಯ ಒಡನಾಟವನ್ನು ಈ ಹೊತ್ತಿಗೆ ವಿವರಿಸಲು ಪದಗಳು ಸಿಗುತ್ತಿಲ್ಲ. ತೊಟ್ಟು ಕಟ್ಟಿಸಿಕೊಂಡು, ಸುವಾಸನೆ ಬೀರುವ ಮಾಲೆ ರೂಪಹೊಂದಿ, ಮಾರುಕಟ್ಟೆಯ ಬಿಸಿಲಿನಲ್ಲಿ ನೀರು ಚಿಮುಕಿಸಿಕೊಂಡು, ಗಿರಾಕಿಯ ಆಗಮನಕ್ಕಾಗಿ ಕಾಯುತ್ತಿದ್ದ "ಅಕ್ಷರ"ಗಳನ್ನೂ ಗೌರವದಿಂದಲೇ ನೋಡಿಕೊಳ್ಳುತ್ತಿದ್ದ ಸಂಪಾದಕರೊಬ್ಬರ ಕುರಿತು ಮಾತುಗಳಿವು. ಇಷ್ಟೆಲ್ಲಾ ಇಲ್ಯಾಕೆ ಹೇಳಬೇಕಾಗಿದೆ ಎಂದರೆ ನಿನ್ನೆ(ಶನಿವಾರ) ನಂ.1 ಕನ್ನಡ ಪತ್ರಿಕೆಯ ಸಂಪಾದಕ ಎತಿರಾಜನ್ ರಾಘವನ್ ನಮ್ಮನ್ನಗಲಿದ್ದಾರೆ. ಅವರ ಕೆಳಗೆ ಕೆಲಸ ಮಾಡಿದ ಅನುಭವ ಇದೇ ಮೇ.18ಕ್ಕೆ ಒಂದು ವರ್ಷ ತುಂಬುತ್ತದೆ, ಅಷ್ಟೆ! ಅವರು ತೀರಿಕೊಂಡರು ಎಂಬ ಸುದ್ದಿ 'ಸ್ಫೋಟ'ವಾಗುವ ಹೊತ್ತಿಗೆ ನಾನು ಕಚೇರಿಯಲ್ಲಿದ್ದೆ. ಕಳೆದ ನೂರ ಎಪ್ಪತ್ತು ಚಿಲ್ಲರೆ ದಿನಗಳ ಹಿಂದೆ ಶುರುವಾದ 'ಯುವ ಗರ್ಜನೆ' ಎಂಬ ಪರಿಕಲ್ಪನೆಗೆ ದೊಡ್ಡ ಮೈಲಿಗಲ್ಲು ಸಿಕ್ಕ ದಿನ ಅದು. ಪ್ರಾದೇಶಿಕ ಭಾಷೆಯ ಪತ್ರಿಕೆಯೊಂದು ಕಾರ್ಪೋರೇಟ್ ಜಗತ್ತಿನ ವೇದಿಯಲ್ಲಿ ನಿಂತು ತಮ್ಮ ನಿಲುವನ್ನು ತಣ್ಣಗೆ ವಿವರಿಸಿದ ಸಮಯ ಕೂಡ. ಅದರ ವರದಿಗಾ...
ನಾಲ್ಕು ಮೂವತ್ತರ ಕಲರವ! ಇದು ಸಂಜೆ ನಾಲ್ಕ ಮೂವತ್ತರ ನಂತರದ ಕಲರವ. ತೀರ್ಥಹಳ್ಳಿಯ ಬಸ್ ನಿಲ್ದಾಣದಲ್ಲಿ ಶಾಲೆ ಬಿಡುತ್ತಿದ್ದಂತೆ ಮಕ್ಕಳು ಸಾಲು ಸಾಲಾಗಿ ತಮ್ಮೂರಿಗೆ ಹೋಗುವ ಬಸ್ಸುಗಳಿಗಾಗಿ ಕಾಯುತ್ತಿರುತ್ತಾರೆ. ಒಂದು ಹತ್ತು ವರ್ಷಗಳ ಹಿಂದೆ ನಾನು ಕೂಡ ಸೇವಾ ಭಾರತಿ ಶಾಲೆಯ ಸಮವಸ್ತ್ರದಲ್ಲಿ ನಮ್ಮೂರಿಗೆ ಹೋಗುವ ಬಸ್ಸಿಗಾಗಿ ಕಾಯುತ್ತಾ ನಿಂತಿರುತ್ತಿದ್ದೆ. ತೀರ್ಥಹಳ್ಳಿಯಲ್ಲಿ ಸೋಮವಾರ ಸಂತೆ. ಅವತ್ತು ಮಾತ್ರ ಬಸ್ಸಿನಲ್ಲಿ ಕಾಲು ಹಾಕಲೂ ಜಾಗವಿರುವುದಿಲ್ಲ. ಸಂತೆ ಮಾಡಿ ಬಂದವರ ತರಕಾರಿ, ಒಣಮೀನುಗಳ ವಾಸನೆ ಘಮ ಬಸ್ಸಿನ ತುಂಬಾ ಆವರಿಸಿಕೊಳ್ಳುತ್ತಿತ್ತು. ಇವತ್ತೂ ಕೂಡ ಭಾರದ ಬ್ಯಾಗನ್ನು ಹಾಕಿಕೊಂಡ ಅನಾಮಿಕ ಪುಟಾಣಿಗಳು ಅದೇ ಕಂಪನ್ನು ಸವಿಯುತ್ತಿದ್ದಾರೆ. ಅವತ್ತು ಒಂದು ರೂಪಾಯಿ ಇದ್ದರೆ ಚಾಕೋಲೆಟ್ ತಿನ್ನುತ್ತಿದ್ದಾಗ ಇದ್ದ ಸಮಾಧಾನ ಇವತ್ತು ಕಾಫಿ ಡೇಯಲ್ಲಿ ಕುಳಿತರು ಸಿಗುವುದಿಲ್ಲ. ನಾನಿಲ್ಲಿ ಹೇಳ ಹೊರಟಿದ್ದು ಅಂತಹ ಪುಟ್ಟು ಮಕ್ಕಳು ತಮ್ಮ ವಿದ್ಯಾಭ್ಯಾಸಕ್ಕಾಗಿ ಚಿಕ್ಕ ವಯಸ್ಸಿನಲ್ಲಿ ತೆರುತ್ತಿರುವ ಬೆಲೆಯ ಕುರಿತು. ತೀರ್ಥಹಳ್ಳಿಯ ಆರ್ಥಿಕ ಪರಿಸ್ಥಿತಿಗೋ ಅಥವಾ ಅಲ್ಲಿನ ಅಡಿಕೆ ಬೆಳೆಗಿರುವ ಬೆಲೆಗೊ ಸಾಮಾನ್ಯರೂ ಕೂಡ ತಮ್ಮ ಮಕ್ಕಳನ್ನು ಇಂಗ್ಲಿಷ್ ಶಾಲೆಗೆ ಕಳುಹಿಸುತ್ತಾರೆ. ಗಲ್ಲಿಗೊಂದರಂತೆ ಪೇಯಿಂಗ್ ಗೆಸ್ಟ್‌ಗಳಿವೆ. ಸ್ವಲ್ಪ ಹಣವಂತರು ತಮ್ಮ ಮಕ್ಕಳನ್ನು ಅಂತಹ ಪೇಯಿಂಗ್ ಗೆಸ್ಟ್‌ಗಳಲ್ಲಿ ಬಿಡುತ್ತಾರೆ. ನಾನು ೮ನೆ ತರಗತಿಯಲ್ಲಿರುವಾಗ ಎರಡೂವರ...