ವಿಷಯಕ್ಕೆ ಹೋಗಿ

'ಕನಸಿನ ಎಡಿಟರ್'!


ಯುವ ಪತ್ರಕರ್ತನ 'ಕನಸಿನ ಎಡಿಟರ್' ಒಂದು ಸುಳಿವನ್ನೂ ಕೊಡದೆ ಕಣ್ಮರೆಯಾಗಿದ್ದಾರೆ!
ಇ. ರಾಘವನ್
ಕೈಗೆ ಆಯುಧ ಕೊಟ್ಟು, ರಣ ಬಿಸಿಲಿನ ಮೈದಾನದ ನಡುವೆ, ಶತ್ರುವನ್ನು ಗುರಿಇಟ್ಟು ತೋರಿಸಿ, ಮರೆಯಲ್ಲಿ ನಿಂತು ಮುಗುಳ್ನುಗುತ್ತಿದ್ದ ಭಾವ ಹಠಾತ್ ಗೊಂದಲಕ್ಕೀಡಾಗಿದೆ. ಒಂದು ವರ್ಷಕ್ಕೂ ಕಡಿಮೆ ಅವಧಿಯ ಒಡನಾಟವನ್ನು ಈ ಹೊತ್ತಿಗೆ ವಿವರಿಸಲು ಪದಗಳು ಸಿಗುತ್ತಿಲ್ಲ. ತೊಟ್ಟು ಕಟ್ಟಿಸಿಕೊಂಡು, ಸುವಾಸನೆ ಬೀರುವ ಮಾಲೆ ರೂಪಹೊಂದಿ, ಮಾರುಕಟ್ಟೆಯ ಬಿಸಿಲಿನಲ್ಲಿ ನೀರು ಚಿಮುಕಿಸಿಕೊಂಡು, ಗಿರಾಕಿಯ ಆಗಮನಕ್ಕಾಗಿ ಕಾಯುತ್ತಿದ್ದ "ಅಕ್ಷರ"ಗಳನ್ನೂ ಗೌರವದಿಂದಲೇ ನೋಡಿಕೊಳ್ಳುತ್ತಿದ್ದ ಸಂಪಾದಕರೊಬ್ಬರ ಕುರಿತು ಮಾತುಗಳಿವು. ಇಷ್ಟೆಲ್ಲಾ ಇಲ್ಯಾಕೆ ಹೇಳಬೇಕಾಗಿದೆ ಎಂದರೆ ನಿನ್ನೆ(ಶನಿವಾರ) ನಂ.1 ಕನ್ನಡ ಪತ್ರಿಕೆಯ ಸಂಪಾದಕ ಎತಿರಾಜನ್ ರಾಘವನ್ ನಮ್ಮನ್ನಗಲಿದ್ದಾರೆ. ಅವರ ಕೆಳಗೆ ಕೆಲಸ ಮಾಡಿದ ಅನುಭವ ಇದೇ ಮೇ.18ಕ್ಕೆ ಒಂದು ವರ್ಷ ತುಂಬುತ್ತದೆ, ಅಷ್ಟೆ!
ಅವರು ತೀರಿಕೊಂಡರು ಎಂಬ ಸುದ್ದಿ 'ಸ್ಫೋಟ'ವಾಗುವ ಹೊತ್ತಿಗೆ ನಾನು ಕಚೇರಿಯಲ್ಲಿದ್ದೆ. ಕಳೆದ ನೂರ ಎಪ್ಪತ್ತು ಚಿಲ್ಲರೆ ದಿನಗಳ ಹಿಂದೆ ಶುರುವಾದ 'ಯುವ ಗರ್ಜನೆ' ಎಂಬ ಪರಿಕಲ್ಪನೆಗೆ ದೊಡ್ಡ ಮೈಲಿಗಲ್ಲು ಸಿಕ್ಕ ದಿನ ಅದು. ಪ್ರಾದೇಶಿಕ ಭಾಷೆಯ ಪತ್ರಿಕೆಯೊಂದು ಕಾರ್ಪೋರೇಟ್ ಜಗತ್ತಿನ ವೇದಿಯಲ್ಲಿ ನಿಂತು ತಮ್ಮ ನಿಲುವನ್ನು ತಣ್ಣಗೆ ವಿವರಿಸಿದ ಸಮಯ ಕೂಡ. ಅದರ ವರದಿಗಾರಿಕೆಗಾಗಿ ಬೆಳಗ್ಗೆಯಿಂದ ಸಂಜೆವರೆಗೂ ಕಾದು, ಕೊನೆಗೆ ಸುದ್ದಿ ಹೆಕ್ಕಿಕೊಂಡು ಕಚೇರಿಗೆ ಬಂದು ಟೈಪಿಸಿ, ತಿದ್ದಿಸಿಕೊಂಡು, ಮತ್ತೆ ಸರಿಯಾದ 'ಕಾಪಿ' ಕೊಟ್ಟು, ಕೆಲಸ ಮುಗಿಸಿ ಹೊರಗೆ ಅಡ್ಡಾಡುತ್ತಿದ್ದ ಕಾಲ ಅದು. ಅಷ್ಟೊತ್ತಿಗಾಗಲೇ ಸಂಪಾದಕರ ಆರೋಗ್ಯದಲ್ಲಿ ಏರುಪೇರಾಗಿದೆ ಎಂಬ ವಿಚಾರ ಗೊತ್ತಾಗಿತ್ತು. ಆದರೆ ಉಗಾದಿಯ ಮುನ್ನ ದಿನ ರಾತ್ರಿ ತಮ್ಮ ಕೊನೆಯ 'ಕರ್ತವ್ಯದ ಸಮಯ'ದಲ್ಲಿ ಅವರು ಸಂತೃಪ್ತಿ ಭಾವದಲ್ಲಿ ಮುಗಿಸಿ ಮನೆಗೆ ಹೋದ ಪರಿ ಕಣ್ಣಿಗೆ ಕಟ್ಟಿದಂತಿತ್ತು. ಹಾಗಾಗಿ ಸಾವಿನಂತಹ ವಿಚಾರದ ಚಿಕ್ಕ ಎಳೆ ಕೂಡ ಮನಸ್ಸಿಗೆ ಬಂದಿರಲಿಲ್ಲ.
ಅವರು ಇದ್ದದ್ದು, ನನಗೆ ಅರ್ಥವಾಗಿದ್ದೇ ಹಾಗೆ...ಸದಾ ಸೌಮ್ಯವಾಗಿ, ಇಡೀ ಕಚೇರಿ ತುಂಬ ಓಡಾಡಿಕೊಂಡಿರುತ್ತಿದ್ದರು. ಕಚೇರಿಗೆ ಹುಡುಕಿಕೊಂಡು ಬರುವ ಸಾಮಾನ್ಯ ಜನರಿಗೂ ಅವರು 'ಕೇಳುಗ'ರಾಗಿದ್ದರು. ಪತ್ರಿಕೋದ್ಯಮ ಎಂಬ ಪಾಕಶಾಲೆಯಲ್ಲಿ ದಿನನಿತ್ಯವೂ ಹೊಸತನದಿಂದ ಯೋಚಿಸುವ ಅವರಿಗೆ ನಲವತ್ತು ವರ್ಷಗಳನ್ನು ಕಳೆದ ಅನುಭವವಿತ್ತು. ಆದರೆ ಅದನ್ನು ಪ್ರೀತಿಯಿಂದಲೇ ಮಾಡುಕೊಂಡು ಹೋಗುವ ಬಯಕೆ ಮತ್ತು ಸ್ಥಿತ ಪ್ರಜ್ಞೆ ಕಾಣುತ್ತಿತ್ತು. ಇನ್ನೂ 'ಫೀಲ್ಡ್'ಗೆ ಬಂದು ಎರಡು ವರ್ಷವೂ ತುಂಬದ ನನ್ನಂತವರಿಗೆ ಅವರು ಹೇಳದೇನೆ ಕಲಿಸುವ ಪರಿ ಇಷ್ಟವಾಗುತ್ತಿತ್ತು. ಬಹುಶಃ ಇದೇ ಸಮಯದಲ್ಲಿ ಪಾರ್ಕಿನ್ಸನ್ ಎಂಬ ಔಷಧಿ ಇಲ್ಲದ ಖಾಯಿಲೆ ಜತೆ ಹೆಣಗುತ್ತಿರುವ ಸಮಾಜವಾದಿ ಮನಸ್ಸಿನ ತಂದೆಯನ್ನು ಇವರಲ್ಲಿ ಕಾಣುತ್ತಿದ್ದೆ ಅನ್ನಿಸುತ್ತದೆ.
ಇದಕ್ಕೂ ಕಾರಣವಿದೆ ಅಂತ ಇವತ್ತು ಅನ್ನಿಸುತ್ತಿದೆ. 'ವಿ.ಕ'ದಲ್ಲಿ ಸಂದರ್ಶನ ಮುಗಿದು, ಕೆಲಸಕ್ಕೆ ಹಾಜರಾದ ನಂತರ ನನ್ನನ್ನು ನೋಡಿದ ಮಾತನಾಡಿಸಿದ ಸಂಪಾದಕ ಅವರಾಗಿದ್ದರು. ಮೊದಲ ಭೇಟಿಯಲ್ಲೇ 'ಗರ್ಲ್ ಫ್ರೆಂಡ್ ಇದಾರಾ?' ಅಂತ ಕೇಳಿದ್ದರು. ನನಗೆ ಸುಳ್ಳು ಹೇಳಲು ಮನಸ್ಸಾಗಿರಲಿಲ್ಲ. ಕನ್ನಡ ದಿನಪತ್ರಿಕೆಯ ಸಂಪಾದಕರಾಗಿ ಅವರು ಇದ್ದದ್ದೇ ಹಾಗೆ. ಎಲ್ಲವನ್ನೂ ಸಂಕೋಚದಿಂದಲೇ ನಿರ್ಧಾರ ತೆಗೆದುಕೊಳ್ಳುವಂತೆ ಕಾಣುತ್ತಿದ್ದರು. ಆದರೆ ಆಳದಲ್ಲಿ ತಮ್ಮ ನಿರ್ಧಾರದ ಜಾರಿ ಕುರಿತು ಸ್ಪಷ್ಟ ತೀರ್ಮಾನ ತೆಗೆದುಕೊಂಡ ಹೋರಾಟಗಾರನ ಛಲ ಇರುತ್ತಿತ್ತು. ಒಂದು ಪುಟ್ಟ ಸಾಧನೆ ಮಾಡಿ ಮುಗಿಸಿ ಎದುರಿಗೆ ಬಂದು ನಿಲ್ಲುವ ಹೊತ್ತಿಗೆ ಅವರು ಎದುರಿನ ಸ್ವಾಗತಕಾರರ ಬಳಿ ಬಂದು ನಗುಮುಖ ಹೊತ್ತು ನಿಂತಿರುತ್ತಿದ್ದರು. ಒಬ್ಬ ಸಂಪಾದಕ ಕನಿಷ್ಠ ತನ್ನ ಕ್ಯಾಬಿನ್ ಬಿಟ್ಟು ಹೊರಗೆ ಇರಬೇಕು ಎಂಬ ಸರಳ ಪಾಠವನ್ನು ಅವರು 'ಕಮ್ಯುನಿಕೇಟ್' ಮಾಡುತ್ತಿದ್ದ ಪರಿ ಇದು.
ಬಹುಶಃ ಕನ್ನಡ ಪತ್ರಿಕೋದ್ಯಮದ 'ಸಂಪಾದಕೀಯ' ವಿಭಾಗದಲ್ಲಿ ಹೊಸ ಅಲೆಯೊಂದು ಬಂದ ಕತೆಯನ್ನು ಇವತ್ತೇ ಹೇಳಿಬಿಟ್ಟರೆ ಅದು ಅವರು ನಂಬಿದ ಸಿದ್ಧಾಂತಕ್ಕೂ ವಿರುದ್ಧ ಅಂತ ಅನ್ನಿಸುತ್ತದೆ. ಪತ್ರಿಕೆಯೊಂದು ಯಾವ ನಿಲುವು ಹೊಂದಿರಬೇಕು? ಪತ್ರಕರ್ತನೊಬ್ಬನ ಹೊಣೆಗಾರಿಕೆ ಏನು? ವೈಯುಕ್ತಿಕ ಮಟ್ಟದಲ್ಲಿ ಸುದ್ದಿ ಮಾಡುವವರು ಹೇಗೆ ಬದುಕಬೇಕು? ಹೀಗೆ ಎಲ್ಲದಕ್ಕೂ ತಮ್ಮನ್ನು ತಾವು ಒಳಗೊಂಡು ಕೆಲಸ ಮಾಡಿ ನಿರೂಪಿಸಿ ತೋರಿಸುತ್ತಿದ್ದರು. ಅಲ್ಲಿ ನಿಲುವುಗಳು, ಸಿದ್ದಾಂತಗಳು, ಜಾತಿಗಳು, ಧರ್ಮದ ಅಮಲು, ಸ್ವಾರ್ಥ ಎಲ್ಲವನ್ನೂ ಬಿಟ್ಟು ಬದುಕುವ ಅವಕಾಶ ಕಲ್ಪಸಲು ಶ್ರಮವಹಿಸಿದ್ದರು. ಹಾಗಾಗಿಯೇ ಅವರು ಅಗಲಿದ ಮೇಲೂ ಕಾಡುವುದಕ್ಕೆ ಕಾರಣಗಳು ಸಿಗುತ್ತಿವೆ.
ಯಾರೋ ಸ್ನೇಹಿತರೊಬ್ಬರು ಹೇಳಿದರು, ಅವರ ಸಾವು 'ಪತ್ರಿಕೆ' ಎಷ್ಟು ಲಾಸ್ ಅಲ್ವಾ? ಅಂತ; ಸೌಜನ್ಯದಿಂದಲೇ! ಆದರೆ ನನಗೆ ಹೇಳಬೇಕು ಅನ್ನಿಸಿದ್ದು ಇಷ್ಟೆ: ಲಾಸ್ ಆಗಿರುವುದು ಕನ್ನಡ ಪತ್ರಿಕೋದ್ಯಮಕ್ಕೆ ಕನಸುಗಳನ್ನು ಕಟ್ಟಿಕೊಂಡು ಬರುವ ಯುವ ತಲೆಮಾರಿನ ಪತ್ರಕರ್ತರಿಗೆ...ಹಾಗಾಗಿಯೇ ಅವರ ಸಾವು ಯುವ ಪತ್ರಕರ್ತರ 'ಕನಸಿನ ಎಡಿಟರ್' ಒಬ್ಬರ ಸಾವು ಅಂತ ಅನ್ನಿಸುತ್ತಿರುವುದು. ಅಷ್ಟೆ...

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಂಗಳೂರು ಡೈರಿ! ಭಾಗ 1 ಜನವಾಹಿನಿಯ ಪಾಳು ಬಿದ್ದ ಬಂಗಲೆಯ ನೆರಳಿನಲ್ಲಿ.... ನಾನು ಎಂಟನೆ ತರಗತಿಯಲ್ಲಿದ್ದಾಗಿನ ನೆನಪು. ತೀರ್ಥಹಳ್ಳಿಯಲ್ಲಿ ನಾನಿದ್ದ ಹಾಸ್ಟೆಲ್ಲಿಗೆ ಜನವಾಹಿನಿ ಪತ್ರಿಕೆ ಬರುತ್ತಿತ್ತು. ಬೆಳಗ್ಗೆ ಆಗುತ್ತಲೆ ಪತ್ರಿಕೆಗಾಗಿ ಪೈಪೋಟಿ ನಡೆಸುತ್ತಿದ್ದೆವು. ಇದಕ್ಕಾಗಿ ಹಲವಾರು ಭಾರಿ ನಮ್ಮಲ್ಲಿ ಗಲಾಟೆಗಳು ಆಗಿದ್ದವು. ಅದೇಕೋ ಆವತ್ತು ಜನವಾಹಿನಿಯೊಂದಿಗೆ ಆರ್ಥವಾಗದ ಸಂದಂಧವೊಂದು ನಮ್ಮಂತ ಚಿಕ್ಕವಯಸ್ಸಿನ ಹುಡುಗರಿಗೆ ಬೆಳೆದಿತ್ತು. ಹಾಗೆಯೆ ಲಂಕೇಶ್ ಪತ್ರಿಕೆ ಕೂಡ ಅದರಲ್ಲಿ ಬರುತ್ತಿದ್ದ ತುಂಟಾಟಕ್ಕಾಗಿ ಓದುತ್ತಿದ್ದೆವು!. ಇವೆಲ್ಲವೂ ಹಳೆಯ ದಿನಗಳು, ಮಾಸಿದ ನೆನಪುಗಳು. ಸಹಜವಾಗಿಯೆ ನಾನು ಸಾಹಿತ್ಯದ ಬಗ್ಗೆ ಬೆಳೆಸಿ ಕೊಂಡಿದ್ದ ಆಸಕ್ತಿ, ನನ್ನಲ್ಲಿ ಹಲವು ಆಲೋಚನೆಗಳನ್ನು ಹುಟ್ಟುಹಾಕಿತು. ಹೊಸ ಪ್ರಪಂಚವೊಂದನ್ನು ಕಂಡ ಆನುಭವ. ಮಲೆನಾಡಿನಲ್ಲಿಯೆ ಹುಟ್ಟಿ ಬೆಳೆದು ಆಲ್ಲಿನ ಪರಿಸರದ ಜೊತೆ ಹೊಂದಿದ ಸಂಬಂಧವೊಂದು ಕಳಚಿಕೊಂಡದ್ದು ಚಳುವಳಿ ಹೋರಾಟ ಅಂತ ಬೀದಿಗೆ ಬಿದ್ದ ಮೇಲೆಯೆ. ಅಲ್ಲಿಯವರೆಗಿದ್ದ ಊರಲ್ಲಿ ಶಿಕಾರಿ ಹುಚ್ಚು, ಕಾಡು ಸುತ್ತುವ ಗೀಳುಗಳು ವೈಚಾರಿಕತೆ ಎಂಬ ಸೋಗಿನಲ್ಲಿ ಪೇವಲವಾಗಿ ಕಂಡಿದ್ದವು. ಜನವಾಹಿನಿ ನಂತರ ಇಷ್ಟವಾಗಿದ್ದು ಆದು ಪ್ರಗತಿಪರ ವಿಚಾರಗಳನ್ನು ಪ್ರತಿಪಾದಿಸುವ ಪತ್ರಿಕೆ ಎಂಬ ಕಾರಣಕ್ಕೆ. ಹಾಗಂತ ನಾನು ನಂಬಿಕೊಂಡಿದ್ದೆ. ಆಷ್ಟರಲ್ಲಾಗಲೆ ಅದು ತನ್ನ ಆಂತರಿಕ ಜಗಳಗಳಿಂದಾಗಿ ಮುಚ್ಚಿಹೋಗುತ್ತು. ಹಾಸ್ಟೆಲ್ಲಿಗೆ ಈ...
ಕಲ್ಲೂರಿ ಎಂಬ ಸಿನಿಮಾ ನೋಡಿದ್ದೀರಾ...? ಪ್ರಶಾಂತ್ ಹುಲ್ಕೋಡು ಸಿನಿಮಾ ಹೇಗಿರಬೇಕು ಎಂದು ನಿರ್ದಿಷ್ಟವಾಗಿ ಹೇಳುವದು ಕಷ್ಟ. ಆದರೆ ಒಳ್ಳೆಯ ಸಿನಿಮಾ ನೋಡುಗನ್ನು ತನ್ನಲ್ಲಿ ಒಂದು ಪಾತ್ರವಾಗಿಸುತ್ತದೆ ಅನ್ನುತ್ತಾರೆ. ಹಾಗಾಗಿಯೆ ಬಾಲಿವುಡ್ ಮಂದಿ ರಿಯಲ್ ಸ್ಟೋರಿಗಳನ್ನು ರೀಲ್‌ನಲ್ಲಿ ತರಲು ಹೆಚ್ಚು ಶ್ರಮವಹಿಸುತ್ತಾರೆ. ಬಾಲಿವುಡ್‌ನಲ್ಲಿಯೂ ಆಂತಹ ಪ್ರಯೋಗಗಳಾಗುತ್ತಿವೆ. ಬದುಕಿಗೆ ಹತ್ತಿರವೆನಿಸುವ ಕತೆಗಳನ್ನು ತೆರೆಗೆ ಅಳವಡಿಸುವುದು ಸುಲಭದ ಕೆಲಸವಲ್ಲ. ಅದಕ್ಕೆ ತನ್ನದೆ ಆದ ಕಮಿಟ್‌ಮೆಂಟ್, ಡೆಡಿಕೇಶನ್ ಇರಬೇಕಾಗುತ್ತದೆ. ಚಿತ್ರದ ನಿರ್ದೇಶಕನಿಗೆ ಅಂತಹ ಸಂವೇದನೆ ಇರದಿದ್ದರೆ ಇಡೀ ಚಿತ್ರ ಹಾಳಾಗಿಬಿಡುತ್ತದೆ. ಈ ಮಾತಿಗೆ ವಿರುದ್ಧವಾಗಿ ಇತ್ತೀಚೆಗೆ ಬಂದ ತಮಿಳಿನ ಕಲ್ಲೂರಿ ಉತ್ತಮ ಉದಾಹರಣೆ. ಈ ಚಿತ್ರದ ಕುರಿತು ಹೇಳುವ ಮುನ್ನ ನಿಮಗೆ ಇದನ್ನು ತೆರೆಗೆ ತಂದ ನಿರ್ದೇಶಕನ ಶ್ರಮದ ಕುರಿತು ಹೇಳಬೇಕು. ಅದು ಕಲ್ಲೂರಿಗಿಂತ ಲೂ ಇಂಟೆರಿಸ್ಟಿಂಗ್. ತಮಿಳಿನ ಪ್ರಸಿದ್ಧ ಚಿತ್ರ ಕಾದಲ್ ನೆನಪಿರಬೇಕು ನಿಮಗೆ. ಅಂತರಜಾತಿ ಪ್ರೇಮ ಕತೆಯನ್ನು ಅದ್ಭುತವಾಗಿ ನಿರೂಪಿಸಿದ ಚಿತ್ರ. ಅದರ ನಿರ್ದೇಶಕ ಬಾಲಾಜಿ ಶಕ್ತಿವೇಲು ಕಾದಲ್ ನಂತರ ನಿರ್ದೇಶಿಸಿದ ಚಿತ್ರವೇ ಕಲ್ಲೂರಿ. ತಮಿಳಿನಲ್ಲಿ ಕಲ್ಲೂರಿ ಎಂದರೆ ಕಾಲೇಜು ಎಂದರ್ಥ. ಕಾದಲ್ ಸೂಪರ್ ಹಿಟ್ ಆದ ನಂತರ ಬಾಲಾಜಿ ಶಕ್ತಿವೇಲು ಮುಂದೆ ನಿರ್ಮಾಪಕರ ದಂಡೇ ನೆರೆದಿತ್ತಂತೆ. ಆದರೆ ಈ ಮಹಾಶಯ ಯಾವುದನ್ನು ಒಪ್ಪಿಕೊಳ್ಳದೆ ಆರ್ಥಿಕ...