ವಿಷಯಕ್ಕೆ ಹೋಗಿ
ಆರೆಸ್ಸೆಸ್ ಕುರಿತು ಒಂದು ಟಿಪ್ಪಣಿ

photo:indiawire
ಸಮಕಾಲೀನ ಸಂದರ್ಭದಲ್ಲಿ ಆರೆಸ್ಸೆಸ್ ಅಥವಾ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಭಾರತದ ಅತಿ ದೊಡ್ಡ ರಾಜಕೀಯ(?) ಸಂಘಟನೆ. ಸಧ್ಯಕ್ಕೆ ಗಣನೀಯ ಪ್ರಮಾಣದ ವಿರೋಧವನ್ನು ಮತ್ತು ಅದೇ ಪ್ರಮಾಣದ ಸಂಘಟನಾ ಸಾಮರ್ಥ್ಯವನ್ನು ಆರೆಸ್ಸೆಸ್ ಕಟ್ಟಿಕೊಂಡಿದೆ. ಬ್ರಾಹ್ಮಣಶಾಹಿಗಳು, ಚಡ್ಡಿಗಳು, ಫ್ಯಾಸಿಸ್ಟರು ಹೀಗೆ ಹಲವಾರು ಉಪಮೇಯಗಳು ಕಳೆದ ೮೦ ವರ್ಷಗಳಲ್ಲಿ ಆರೆಸ್ಸೆಸ್‌ಗೆ ಅನ್ವರ್ಥವಾಗಿ ಹುಟ್ಟಿಕೊಂಡರು ದೇಶಭಕ್ತರು ಎಂಬ ಪಟ್ಟವನ್ನು ಸಂಘ ಯಾರಿಗೂ ಬಿಟ್ಟುಕೊಟ್ಟಿಲ್ಲ. ದೇಶ, ದೇಶಪ್ರೇಮ ಎಂಬ ಪರಿಭಾಷೆಗೆ ಏನೇ ಸೈದ್ಧಾಂತಿಕ ವಿಶ್ಲೇಷಣೆ ಕೊಟ್ಟರು ಸಾಮಾನ್ಯ ಜನರ ಕಣ್ಣಲ್ಲಿ ಆರೆಸ್ಸೆಸ್ ರೂಢಿಸಿರುವ ಪರದೇಶ ವಿರೋಧಿ ಭಾರತ ಪ್ರೇಮ ಆಳವಾಗಿ ಬೇರುಬಿಟ್ಟಿದೆ.
ಇವತ್ತಿಗೆ ಆರೆಸ್ಸೆಸ್ ಕುರಿತು ಏಕಮುಖವಾದ ವಿರೋಧದ ಅಥವಾ ಕುರುಡು ಅಭಿಮಾನದ ಸಾಹಿತ್ಯಗಳು ಲಭ್ಯವಾಗುತ್ತವೆಯೇ ಹೊರತು ಆರೆಸ್ಸೆಸ್‌ನ ಸಂಘಟನೆಯ ಆಳ, ಅದು ಬೆಳೆಯುತ್ತಿರುವ ವೇಗದ ಕುರಿತು ಗಂಭೀರ ಬರಹಗಳು ವಿರಳ. ಕೋಮುವಾದಕ್ಕೆ ಪರ್ಯಾಯವಾಗಬೇಕಿದ್ದ ಜಾತ್ಯಾತೀತವಾದ ಜನರಿಗೆ ಒಂದು ಕೋಮಿನ ಪರವಾದ ನಿಲುವು ಎಂಬತೆ ಕಾಣುತ್ತಿರುವುದಕ್ಕೆ ಇದು ಕಾರಣವಿರಬಹುದು.
೧೯೨೦ರ ಸುಮಾರಿಗೆ ಆರೆಸ್ಸೆಸ್‌ನ ಹಿಂದೂ ರಾಷ್ಟ್ರದ ಸಿದ್ಧಾಂತ ಭಾರತದ ರಾಜಕೀಯದಲ್ಲಿ ಯಾವುದೇ ಪ್ರಾಮುಖ್ಯತೆ ಹೊಂದಿರಲಿಲ್ಲ. ಹಿಂದುತ್ವದ ಪ್ರತಿಪಾದನೆಗಾಗಿ ೧೯೨೫ರಲ್ಲಿ ಕೇಶವ ಬಲಿರಾಮ್ ಹೆಡ್ಗೆವಾರ್ ಎಂಬ ವ್ಯಕ್ತಿ ಆರೆಸ್ಸೆಸ್ ಹುಟ್ಟುಹಾಕಿದಾಗ ಯಾರೂ ಇದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಅವತ್ತಿಗಿನ್ನೂ ಕಾಂಗ್ರೆಸ್‌ನ ಒಳಗೂ ಹೊರಗೂ ಒಡಾಡಿಕೊಂಡಿದ್ದ ಹೆಡ್ಗೆವಾರ್ ಸ್ಥಾಪಿಸಿದ ಸಂಘಟನೆಯನ್ನು ಖುದ್ದು ಹಿಂದೂಮಹಾಸಭಾದ ಮುಂದಾಳುಗಳೇ ಉಪೇಕ್ಷೆ ಮಾಡಿದ್ದರು.
ಕೇವಲ ಅಥವಾ ಎಂಭತ್ತು ವರ್ಷಗಳಲ್ಲಿ ಆರೆಸ್ಸೆಸ್ ತನ್ನ ಕಾರ್ಯಕ್ಷಮತೆಯಲ್ಲಿ ಗಣನೀಯ ಪ್ರಮಾಣದ ಬೆಳವಣಿಗೆ ಕಂಡಿದೆ. ಹೆಡ್ಗೆವಾರ್ ನೆಟ್ಟ ಹಿಂದುತ್ವದ ಬೀಜ ಇಂದು ಮರವಾಗಿ ದೇಶದ ರಾಜಕೀಯದ ಕೇಂದ್ರಸ್ಥಾನದವರೆಗೂ ತನ್ನ ಬೇರನ್ನು ಬಿಟ್ಟಿದೆ. ಇವತ್ತಿನ ಪರಿಸ್ಥಿತಿ ಎನಪ್ಪ ಅಂದ್ರೆ ಒಂದೋ ಆರೆಸ್ಸೆಸ್‌ನ ಹಿಂದುತ್ವ ಸಿದ್ಧಾಂತವನ್ನು ಅಪ್ಪಿಕೊಳ್ಳಬೇಕು ಇಲ್ಲವೇ ವಿರೋಧಿಸಬೇಕು. ಮೂರರನೆ ತಟಸ್ಥ ನಿಲುವು ಅಸಾಧ್ಯ ಎಂಬಂತಾಗಿದೆ.
೧೯೩೧ರಲ್ಲಿ ಆರೆಸ್ಸೆಸ್ ನಡೆಸುತ್ತಿದ್ದ ಶಾಖೆಗಳ ಸಂಖ್ಯೆ ಕೇವಲ ೬೦. ೧೯೩೬ರಲ್ಲಿ ೨೦೦ ಶಾಖೆಗಳು ಹಾಗು ೨೫೦೦೦ ಸದಸ್ಯತ್ವವನ್ನು ಅದು ಹೊಂದಿತ್ತು. ೧೯೩೯ರಲ್ಲಿ ೫೦೦ ಶಾಖೆಗಳು ಹಾಗು ೪೦೦೦೦ ಸದಸ್ಯರನ್ನು ಆರೆಸ್ಸೆಸ್ ನೋಂದಾಯಿಸಿಕೊಂಡಿತ್ತು. ಇದಾದ ಒಂದೇ ವರ್ಷದಲ್ಲಿ ೭೦೦ ಶಾಖೆಗಳು ಹಾಗು ೮೦೦೦೦ ಸದಸ್ಯತ್ವ ಹೊಂದಿತು. ಅಲ್ಲಿಂದಾಚೆಗೆ ಆರೆಸ್ಸೆಸ್ ಸಂಘಟನಾತ್ಮಕವಾಗಿ ಅಲ್ಲದೆ ರಾಜಕೀಯವಾಗಿಯೂ ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಲೇ ಬರುತ್ತಿದೆ. ಅಂದಾಜಿನ ಪ್ರಕಾರ ೧೯೭೯-೮೯ರ ನಡುವೆ ೧೦ ಲಕ್ಷದಷ್ಟಿದ್ದ ಆರೆಸ್ಸೆಸ್‌ನ ಸ್ವಯಂ ಸೇವಕರ (ನೆನಪಿಡಿ, ಜೀವನವನ್ನೇ ಅರ್ಪಿಸಿರುವ) ಸಂಖ್ಯೆ ೧೯ ಲಕ್ಷಕ್ಕೇರಿತು ಮತ್ತು ದೇಶಾದ್ಯಂತ ೧೮೮೦೦ ನಗರ ಹಾಗು ಹಳ್ಳಿಗಳಲ್ಲಿ ೨೫೦೦ ಸಾವಿರ ಶಾಖೆಗಳನ್ನು ಅದು ನಡೆಸುತ್ತಿತ್ತು. ಇಂದು ಆರೆಸ್ಸೆಸ್‌ನ ನೇರ ಮಾರ್ಗದರ್ಶನದಲ್ಲಿ ೩೮ ವಿವಿಧ ಸಂಘಟನೆಗಳು ಕಾರ್ಯನಿರ್ವಹಿಸುತ್ತಿದ್ದು, ೫೦ ಲಕ್ಷದಷ್ಟು ಜನಸಮೂಹವನ್ನು ಅದು ತನ್ನ ಕಾರ್ಯಕ್ಷೇತ್ರದಲ್ಲಿ ಒಳಗೊಂಡಿದೆ ಎಂಬ ಅಂದಾಜಿದೆ.
ಆರೆಸ್ಸೆಸ್ ಹೇಳುವ ವಿಚಾರವನ್ನು ವಿರೋಧಿಸುವ ನೆಲೆಯಲ್ಲಿಯೆ ಭಿನ್ನ ಅಭಿಪ್ರಾಯಗಳಿವೆ. ಆರೆಸ್ಸೆಸರನ್ನು ಫ್ಯಾಸಿಸ್ಟರೆಂದು ಕರೆಯಬೇಕಾ? ಬೇಡವಾ ಎಂಬರ್ಥದ ಚರ್ಚೆಗಳು ನಡೆಯುತ್ತಲೇ ಎರುತ್ತದೆ. ವಿಶೇಷವೆಂದರೆ ಇಂತಹ ಅಕೆಡೆಮಿಕ್ ಚರ್ಚೆಗಳನ್ನು ಆರೆಸ್ಸೆಸ್ ತನ್ನ ಹುಟ್ಟಿನಿಂದಲೇ ಉಪೇಕ್ಷಿಸಿದೆ. ಮತ್ತು ಇದನ್ನೇ ತನ್ನ ಸಂಘಟನಾ ಶಕ್ತಿಯನ್ನಾಗಿ ಬಳಸಿಕೊಳ್ಳುತ್ತಿದೆ.
ಮಾತಿಗಿಂತಲೂ ಕ್ರಿಯೆಗೆ ಮಹತ್ವ ನೀಡುವ ಆರೆಸ್ಸೆಸ್ ಯಾವತ್ತು ತನ್ನ ವಿಚಾರಗಳ ಕುರಿತು ಮುಕ್ತ ಚರ್ಚೆಯನ್ನು ನಡೆಸಲು ಚಿಕ್ಕ ಅವಕಾಶವನ್ನು ನೀಡುವುದಿಲ್ಲ.ಸೈದ್ಧಾಂತಿಕವಾಗಿ ಗಟ್ಟಿತನವಿಲ್ಲದ ಸಂಘಟನೆಯೊಂದು ತನ್ನ ಕ್ರಿಯೆ ಇಂದಲೇ ತನ್ನ ವಿಚಾರವನ್ನು ಜೀವಂತವಾಗಿಟ್ಟಿದ್ದರೆ ಅದು ಆರೆಸ್ಸೆಸ್ ಮಾತ್ರ. ಹಾಗಂತ ತನ್ನ ಹಿಂದೂರಾಷ್ಟ್ರದ ಸಿದ್ಧಾಂತವನ್ನು ೧೯೨೫ರಿಂದಲೂ ಒಂದೇ ರಾಗದಲ್ಲಿ ಹಾಡುತ್ತಿದೆ ಎಂದರ್ಥವಲ್ಲ. ಕಾಲಕ್ಕೆ ತಕ್ಕಂತೆ ತನ್ನ ಸಿದ್ಧಾಂತದಲ್ಲಿ ಆರೆಸ್ಸೆಸ್ ಮಾರ್ಪಾಡುಗಳನ್ನು ಮಾಡಿಕೊಳ್ಳುತ್ತಲೆ ಬರುತ್ತಿದೆ. ಅದಕ್ಕಗಿಯೇ ದೇಶದ ಇತಿಹಾಸವನ್ನು ತಿರುಚುವ ಸಲುವಾಗಿಯೇ ರಾಷ್ಟ್ರಮಟ್ಟದಲ್ಲಿ ಸಂಕಲನ ಸಮಿತಿಯನ್ನು ರಚಿಸಿದೆ.
ಆರೆಸ್ಸೆಸ್‌ನ ಮೂಲ ಹಿಂದೂ ರಾಷ್ಟ್ರದ ಪರಿಕಲ್ಪನೆ ಆಧುನಿಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ವಿರೋಧಿಸುತ್ತದೆ. ಆದರೆ ಆರೆಸ್ಸೆಸ್‌ನ ಪ್ರಮುಖ ರಾಜಕೀಯ ಮುಖವಾಗಿರುವ ಭಾರತೀಯ ಜನತಾ ಪಕ್ಷ ಇದೇ ಪ್ರಜಾಪ್ರಭುತ್ವವನ್ನು ಉಪಯೋಗಿಸಿಕೊಂಡು ಅಧಿಕಾರದ ಗದ್ದುಗೆ ಹಿಡಿದು ತನ್ನ ಮೂಲ ಅಜೆಂಡಾವನ್ನು ಕಾರ್ಯರೂಪಕ್ಕಿಳಿಸಲು ಹೆಣಗುತ್ತದೆ. ಇದು ಅವಕಾಶಕ್ಕಾಗಿ ಆರೆಸ್ಸೆಸ್ ತನ್ನ ಮೂಲ ಸಿದ್ಧಾಂತದಲ್ಲಿ ಬೇಕಾದರೂ ಬದಲಾವಣೆಗಳನ್ನು ಮಾಡಿಕೊಳ್ಳಬಲ್ಲದು ಎಂಬುದಕ್ಕೆ ಉದಾಹರಣೆ ಅಷ್ಟೆ.
ಆರೆಸ್ಸೆಸ್ ಮೇಲ್ಜಾತಿಯವರ ಸಂಘಟನೆ ಎಂಬುದು ಹಳೆಯ ಅಪಾದನೆ. ಇವತ್ತು ದಲಿತ ಕೇರಿಗಳಿಂದ ಹಿಡಿದು ಆದಿವಾಸಿ ಹಾಡಿಗಳವರೆಗೆ ಆರೆಸ್ಸೆಸ್‌ನ ಕಲ್ಯಾಣ್ ಕಾರ್ಯಕ್ರಮಗಳು ಹರಡಿವೆ. ಜಾತಿ ವ್ಯವಸ್ಥೆಯಿಂದ ನಲುಗಿರುವ ವರ್ಗವನ್ನು ಕೇಸರಿ ಶಾಖೆಗಳು ತಲುಪಿವೆ. ಹಿಂದುತ್ವ ಸನಾಥನವಾದುದು ಹಾಗು ಮನುವಿನ ಮನುಷ್ಯವಿರೋಧಿ ಸಿದ್ಧಾಂತದ ಮುಂದುವರಿಕೆ ಈ ಹಿಂದುತ್ವವಾದ ಎಂದು ಹೇಳಲಾಗುತ್ತಿದೆ. ಆದರೆ ಆರೆಸ್ಸೆಸ್ ಯಾವತ್ತು ಆಧುನಿಕತೆಗೆ ಎದುರಾಗಲಿಲ್ಲ. ಬದಲಿಗೆ ಆರೆಸ್ಸೆಸ್ ಆಧುನಿಕತೆಯ ಪ್ರತಿಫಲನದಂತೆ ಕಾಣುತ್ತಿದೆ. ಹಿಂದೆ ನಾವು (ಹಿಂದೂಗಳು) ಹಾಗು ಅವರು (ಮುಸ್ಲಿಂರು) ಎಂದು ಕಾರ್ಯತಂತ್ರ ರೂಪಿಸುತ್ತಿದ್ದ ಆರೆಸ್ಸೆಸ್ ಇಂದು ನಾವು ಹಾಗು ಉಳಿದವರು (ಕ್ರಿಶ್ಚಿಯನ್ನರು, ಬುದ್ಧಿಜೀವಿಗಳು) ಎಂಬ ರಣತಂತ್ರ ಹೊಸೆಯುತ್ತಿದೆ. ಆರೆಸ್ಸೆಸ್ ಫ್ಯಾಸಿಸ್ಟ್ ಹೌದೋ ಅಲ್ಲವೊ ಆದರೆ ಭಾರತದಲ್ಲಿ ಫ್ಯಾಸಿಸಂ ನಡೆಸುವ ಅವಕಾಶವಿರುವುದು ಅದರ ಕೈಯಲ್ಲಿ ಮಾತ್ರ.
ಮೀಸಲಾತಿಯನ್ನ ಬದಲಾದ ಸನ್ನಿವೇಶದಲ್ಲಿ ಪುನರ್ ವಿಮರ್ಶೆಗೆ ಒಳಪಡಿಸಬೇಕು, ಮೀಸಲಾತಿಯನ್ನು ಪಡೆದವರೆ ಪಡೆಯುವುದರಿಂದ ಇದು ದುರುಪಯೋಗವಾಗುತ್ತಿದೆ ಎಂಬ ಅಸಹನೆ ಇಂದು ಮಧ್ಯಮ ವರ್ಗದಲ್ಲಿ ಸಹಜವಾಗಿದೆ. ಆದರೆ ಕನಿಷ್ಟ ಮೀಸಲಾತಿಯ ಪುನರ್ ವಿಮರ್ಶೆಯ ಕುರಿತು ಮಾತನಾಡಿದರೆ ದಲಿತವಿರೋಧಿ ಎಂಬ ಪಟ್ಟವನ್ನು ಯಾರಾದರೂ ದಯಪಾಲಿಸುತ್ತಾರೆ. ಆದರೆ ಮಧ್ಯಮ ವರ್ಗದ ಅಸಹನೆಯನ್ನು ಅಸ್ತ್ರವಾಗಿಸಿಕೊಂಡು ಆರೆಸ್ಸೆಸ್ ತನ್ನ ಮೀಸಲಾತಿ ವಿರೋಧಿ ನಿಲುವನ್ನು ಸಮರ್ಥಿಸಿಕೊಂಡಿತು.
ಇದು ಕೇವಲ ಮೀಸಲಾತಿ ವಿಚಾರದಲ್ಲಿ ಮಾತ್ರವಲ್ಲ, ಪ್ರತಿಯೊಂದು ವಿಚಾರದಲ್ಲೂ ಆರೆಸ್ಸೆಸ್ ಜನರ ನಾಡಿಮಿಡಿತವನ್ನು ಹಿಡಿಯುವಲ್ಲಿ, ಸನಸಮೂಹದ ಸನ್ನಿಗೊಂದು ಕಾರ್ಯಕ್ರಮ ನೀಡುವಲ್ಲಿ ಯಶಸ್ಸಾಗುತ್ತಿದೆ. ಒಂದು ಸಮುದಾಯದ ಪ್ರಜ್ನೆಯನ್ನು ಸಂಕುಚಿತಗೊಳಿಸಿ ಧಾರ್ಮಿಕ ಪ್ರಜ್ನೆಯನ್ನಾಗಿ ಬೆಳೆಸುತ್ತಿದೆ.
ಆರೆಸ್ಸೆಸ್‌ನ ವಿರೋಧಕ್ಕಾಗಿ ಬಳಸುವ ಪದಪುಂಜಗಳು ಜನಸಾಮಾನ್ಯರವರೆಗೆ ತಲುಪುವುದಿಲ್ಲ, ತಲುಪಿದರೂ ಅದು ಅವರಿರೆ ಅರ್ಥವಾಗುವುದಿಲ್ಲ ಎಂಬಂತಾಗಿದೆ. ಆರೆಸ್ಸೆಸ್ ದಲಿತ ವಿರೋಧಿ, ಮೇಲ್ಜಾತಿ ಸಂಘ, ಪ್ರಜಾಪ್ರಭುತ್ವ ವಿರೋಧಿ, ಮನುವಾದಿ ಹೀಗೆ ಏನೇನೆಲ್ಲ ಬಡಿದುಕೊಂಡರು ಜನಸಾಮಾನ್ಯನಿಗೆ ಮೋದಿ ದೇವರಾಗಿ, ಬಿಜೆಪೆಯೇ ಪರಿಹಾರವಾಗಿ ಕಾಣಿಸುತ್ತದೆ.
ಆರೆಸ್ಸೆಸ್ ಸಮಾಜವನ್ನು ಧರ್ಮದ ಆಧಾರದಲ್ಲಿ ಒಡೆಯುವ ಹಾಗು ಅದೇ ಸಂಧರ್ಭದಲ್ಲಿ ತನ್ನೊಳಗೆ ಕಟ್ಟುವ ಗುಣವನ್ನು ಹೊಂದಿದೆ. ತನ್ನ ಶಾಖೆಗಳಲ್ಲಿ ಜಾತೀಯತೆಗೆ ಅವಕಾಶವಿಲ್ಲ. ಪ್ರತಿಯೊಬ್ಬರು ಹಿಂದೂ ಎಂಬ ಏಕಪ್ರಕಾರದ ಐಡೆಂಟಿಟಿಯಿಂದ ಗುರುತಿಸಲ್ಪಡುತ್ತಾರೆ. ಹಾಗಗಿಯೆ ಒಮ್ಮೆ ಆರೆಸ್ಸೆಸ್ ತೆಕ್ಕೆಗೆ ಬಂದ ಯಾವ ಕೆಳಜಾತಿಯ ಸದಸ್ಯನೂ ಇದನ್ನು ಮೇಲ್ಜಾತಿಯ ಸಂಘವೆಂದು ದೂರುವುದಿಲ್ಲ(ಎ.ಕೆ.ಸುಬ್ಬಯ್ಯರನ್ನು ಹೊರತುಪಡಿಸಿ).
ಆರೆಸ್ಸೆಸ್‌ನ ಯಶಸ್ಸಿಗೆ ಜಾತ್ಯಾತೀತ ಮನಸ್ಸುಗಳ ಸೋಲೆ ಕಾರಣವೆಂಬ ಹಳೆಯ ವಿಮರ್ಶೆ ಸಾಮಾನ್ಯವಾದದ್ದು. ಆದರೆ ಆರೆಸ್ಸೆಸ್‌ನ ಸಂಘಟನಾತ್ಮಕ ಯಶಸ್ಸಿನ ಹಿಂದೆ ತನ್ನದೇ ಆದ ವಿಷೇಶ ಗುಣಗಳನ್ನು ಮೈಗೂಡಿಸಿಕೊಂಡಿದೆ. ಮಾತಿಗಿಂತ ಕ್ರಿಯೆಗೆ ಇರುವ ಮಹತ್ವ ಆರೆಸ್ಸೆಸ್ ನೋಡಿದರೆ ಅರ್ಥವಾಗುತ್ತದೆ. ಹಾಗು ಇವತ್ತು ಬಳಸುತ್ತಿರುವ ಕೆಲವು ಆರೆಸ್ಸೆಸ್ ವಿರೋಧಿ ಸಿದ್ಧ ಮಾದರಿಯ ಪದಪುಂಜಗಳನ್ನು ಜನರಿಗೆ ಅರ್ಥವಾಗುವ ರೀತಿಯಲ್ಲಿ( ಅಫ್ ಕೋರ್ಸ್ ಕನ್ನಡದಲ್ಲಿಯೇ) ಬಳಸಬೇಕಿದೆ. ಇಲ್ಲವಾದಲ್ಲಿ ಜನಪರ ಚಿಂತನೆ ಎಷ್ಟೆ ಉತ್ತಮವಾಗಿದ್ದರೂ ಸಾಮಾನ್ಯ ಜನರ ಬೆಂಬಲವಿಲ್ಲದೆ ಉಳಿಯುವ ಆತಂಕವಿದೆ.

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ದೇವೆಂದ್ರ ಎಂಬ ಹಸನ್ಮುಖಿ….! ರಾಯಚೂರು ಮುಗುಸಿ, ಕೊಪ್ಪಳದ ಕೆಲವು ಹಳ್ಳಿಗಳಲ್ಲಿ ಓಡಾಡಿಕೊಂಡು ಸೀದಾ ಹೊರಟಿದ್ದು ಗದಗ ಜಿಲ್ಲೆಗೆ. ಅಲ್ಲಿನ ಕೆಲವು ಗೆಳೆಯರು ಜೊತೆಯಾಗುತ್ತೇವೆ ಎಂದು ಹೇಳಿದ್ದರು ನಾವು ತಲುಪುವ ಹೊತ್ತಿಗೆ ಅವರು ತಮ್ಮದೇ ಕೆಲಸದ ಮೇಲೆ ಹೊರಟು ಹೋಗಿದ್ದರು. ಗದಗ ಜಿಲ್ಲೆಯ ರೋಣ ತಾಲೂಕಿನ ಬಿ.ಎಸ್. ಬೆಲೇರಿ ಎಂಬ ಜಿಲ್ಲಾ ಕೇಂದ್ರದಿಂದ ೫೫ ಕಿ.ಮೀ ದೂರದ ಹಳ್ಳಿಯೊಂದನ್ನು ತಲುಪುವುದೇ ದೊಡ್ಡ ಸಾಹಸದ ಮಾತಾಗಿತ್ತು. ಊರಿಗಿದ್ದ ಒಂದು ಹಳೆಯ ಸೇತುವೆ ಬಿದ್ದು ಹೋಗಿದ್ದರಿಂದ ಹಳ್ಳಿಗೆ ರಸ್ತೆ ಸಂಪರ್ಕವೇ ಇಲ್ಲವಾಗಿತ್ತು. ನಾವು ಹೋಗುವಾಗ ಹೊಳೆಯ ನೀರು ಕಡಿಮೆಯಾಗಿತ್ತು. ಹೊಳೆಯ ವರೆಗೂ ಟಮ್ ಟಮ್ ಎಂದು ಕರೆಯುವ ಆಟೋ ರಿಕ್ಷಾವನ್ನು ಬಾಡಿಗೆಗೆ ಹಿಡಿದು ಅಲ್ಲಿಂದ ಮೂರು ಕಿಮೀ ನಡೆದರೆ ಬೇಲೆರಿ ಸಿಗುತ್ತದೆ. ನಿಂಗು ಬೆಲೇರಿಯಲ್ಲಿ ಪಿಯುಸಿ ಓದಿರುವ ಯುವಕ. ಅಷ್ಟೆ ಅಲ್ಲ ನಿಂಗುಗೆ ಸ್ವಲ್ಪ ರಾಜಕೀಯದ ಗೀಳಿದೆ. ಸ್ಥಳೀಯ ರಾಜಕಾರಣಿಗಳ ಸೋಗಲಾಡಿತನಗಳು ಅನುಭವಕ್ಕೆ ಬಂದಿವೆ. ನಮ್ಮೆದುರು ಆರಂಭದಲ್ಲಿ ನೆರೆಯ ಸುತ್ತಮುತ್ತಲೇ ಮಾತನಾಡಿದ ನಿಂಗು ಮಾತಿನಲ್ಲಿ ಒಂದು ಸಾತ್ವಿಕ ಸಿಟ್ಟಿತ್ತು. ನಿಧಾನವಾಗಿ ಮಾತನಾಡಲು ಆರಂಭಿಸಿ ಕೊನೆಗೆ ಸ್ಥಳೀಯ ಗ್ರಾಮ ಪಂಚಾಯ್ತಿಯಲ್ಲಿ ಮೊದಲು ಬದಲಾವಣೆ ಆಗ್ಬೇಕು, ಹಾಗಾಗಿ ಕೆಲಸಕ್ಕೆ ಗೆಳೆಯರು ಬೆಂಗಳೂರಿಗೆ ಹೋಗೊಣ ಅಂದ್ರು ಇಲ್ಲೇ ಇದ್ದೀನಿ, ಈಗ ನೋಡಿ ನೆರೆ. ಏನಾದ್ರೂ ಒಳ್ಳೆದೂ ಮಾಡ್ಬೇಕು ಅಲ್ವಾ ಎಂದು ಬೆಂಗಳೂರು ಕನ್ನಡದ
‘ಹೆಮ್ಮರ’ ಹಳ್ಳಿ ಶಾಲೆಯ ಮಕ್ಕಳಿಗೆ ವರ! “ಕನ್ನಡಿಗಳನ್ನು ಕಿಟಕಿಗಳಾಗಿ ಪರಿವರ್ತಿಸುವುದೇ ಶಿಕ್ಷಣದ ಬಹುಮುಖ್ಯ ಕರ್ತವ್ಯ” -ಸಿಡ್ನಿ ಜೆ ಹ್ಯಾರಿಸ್. ಭಾರತದಲ್ಲಿ ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿರುವುದು ಪ್ರಾಥಮಿಕ ಶಿಕ್ಷಣ. ಸರಕಾರಿ ಶಾಲೆಗಳಿಗೆ ಹೋಗುವ ಮಕ್ಕಳಿಗೆ ಉತ್ತಮ ಭವಿಷ್ಯ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೂ ಕೆಲವೊಮ್ಮೆ ಹಳ್ಳಿ ಶಾಲೆಗಳಲ್ಲಿ ಕ್ರಿಯಾಶೀಲತೆಯ ಕುಡಿಗಳು ಅರಳುತ್ತವೆ. ಇದು ಭಾರತದಂತಹ ದೇಶದಲ್ಲಿರು ಮತ್ತೊಂದು ಸಾಧ್ಯತೆ. ಸೆಲೆಬ್ರಿಟಿಗಳು ಎಂದು ಕರೆಸಿಕೊಳ್ಳುವ ಬಹುತೇಕ ಮಂದಿ ಹಳ್ಳಿ ಶಾಲೆಗಳಲ್ಲಿ ಕಲಿತು ಬಂದಿರುವುದು ಇದಕ್ಕೆ ಸಾಕ್ಷಿ. ಶಿಕ್ಷಣ ಎನ್ನುವುದು ನಾವು ಕಲಿತದ್ದನ್ನು ಅಧಿಕೃತಗೊಳಿಸುತ್ತದೆ. ಶಿಕ್ಷಕರು ಕೇವಲ ಮಾರ್ಗದರ್ಶನ ನೀಡಬಹುದೇ ಹೊರತು ಅದರಾಚೆಗಿನ ನಿರೀಕ್ಷೆಗಳಿಗೆ ಅವರು ನೀರೆರೆಯಲು ಸಾಧ್ಯವಿಲ್ಲ. ಆದರೆ ಇಂತಹ ಸಣ್ಣ ಮಾರ್ಗದರ್ಶನಗಳು ಸರಕಾರಿ ಶಾಲೆಗಳಲ್ಲಿ ಸಿಗದಿರುವ ಕಾರಣಕ್ಕೆ ಖಾಸಗಿ ಶಾಲೆಗಳ ಮೊರೆ ಹೋಗುವ ಪೊಷಕರು ನಮ್ಮಲ್ಲಿದ್ದಾರೆ. ಸರಕಾರಗಳ ದೂರದೃಷ್ಠಿಯ ಕೊರತೆ, ಸೌಲಭ್ಯಗಳ ಕೊರತೆ ಹಾಗೂ ಶಿಕ್ಷಕರಲ್ಲಿ ಬದ್ದತೆಯ ಕೊರತೆಗಳು ಇಂದು ಭಾರತದ ಪ್ರಾಥಮಿಕ ಶಿಕ್ಷಣದಲ್ಲಿನ ಬಹುಮುಖ್ಯ ಕೊರತೆಗಳು. ಆದರೆ ಇವುಗಳ ನಡುವೆಯೇ ಕುಂ.ವಿ ತರಹದ ಆದರ್ಶ ಶಿಕ್ಷಕರು ಕುಗ್ರಾಮಗಳ ಶಾಲೆಗಳಲ್ಲಿ ಕ್ರಾಂತಿಕಾರಕ ಬದಲಾವಣೆ
ಮಹಾಮಾರಿಯ ಭೀತಿಯಲ್ಲಿದ್ದ ತಲೆಮಾರಿ ಹಾಗೂ ಆಂದ್ರದ ಕುರಿತು ಅಭಿಮಾನ! ಮುಂಜಾನೆ ಹೊರಡುವಾಗ ತಲುಪಲಿದ್ದ ಹಳ್ಳಿಯ ಹೆಸರು ಕೂಡ ಗೊತ್ತಿರಲಿಲ್ಲ. ಸ್ಥಳೀಯ ಎನ್‌ಜಿಒ ಒಂದರ ಸಹಾಯದಿಂದ ’ತಲೆಮಾರಿ’ ಹಳ್ಳಿಗೆ ಹೊರಟಿದ್ದೆವು. ರಾಯಚೂರಿನಿಂದ ಸುಮಾರು ೫೨ ಕಿಮೀ ದೂರದಲ್ಲಿರುವ ತಲೆಮಾರಿ ನಾವು ಕಂಡ ಇತರ ಹಳ್ಳಿಗಳಿಗೆ ಹೋಲಿಸಿದರೆ ಅತಿ ಹೆಚ್ಚು ಹಾನಿಗೊಳಗಾದ ಹಳ್ಳಿ. ನಿಂತ ನೆಲದಿಂದ ಸುಮಾರು ೪೦ ಅಡಿ ಎತ್ತರಕ್ಕೆ ನೆರೆಯ ನೀರು ನುಗ್ಗಿ ಬಂದಿತ್ತಂತೆ. ಅದಕ್ಕೆ ಕುರುವುಗಳಂತೆ ನಾವು ಹೋದಾದ ಅಳಿದುಳಿದ ಮನೆಯ ಗೋಡೆಗಳ ಮೇಲೆ ಕೆಸರು ನೀರಿನ ಕುರುವು ಉಳಿದುಕೊಂಡಿತ್ತು. ತಲೆಮಾರಿಯ ಇನ್ನೊಂದು ವಿಶೇಷ ಎನಪ್ಪಾ ಅಂದ್ರೆ, ರಾಯಚೂರಿನ ಇತರ ನೆರೆ ಪೀಡಿತ ಹಳ್ಳಿಗಳಿಗೆ ಇಲ್ಲಿನ ಜನ ಮಾದರಿಯಾಗಿದ್ದರು. ನೆರೆ ನಿಂತು ಮೂರು ದಿನಗಳದ್ರೂ ಯಾವ ಜನಪ್ರತಿನಿಧಿಗಳು ವಿಚಾರಿಸಿಕೊಳ್ಳಲಿಲ್ಲ ಎಂಬ ಸಿಟ್ಟಿಗೆ ಎಂಎಲ್‌ಎ ಕಾರಿಗೆ ಬೆಂಕಿ ಇಟ್ಟಿದ್ದರು ಹಳ್ಳಿಯ ಜನ. ನಾವು ಹೋದಾಗ ಒಂದು ಪೊಲೀಸ್ ತುಕುಡಿ ಅತಂಕದಿಂದಲೇ ಊರು ಕಾಯುತ್ತಾ ನಿಂತಿತ್ತು. ಸುಟ್ಟು ಕರಕಲಾದ ವಾಹನಗಳು ನೆರೆಯ ಸ್ಮಾರಕಗಳಂತೆ ಉಳಿಸಿಕೊಂಡಿದ್ದರು. ಊರು ತುಂಬ ಸತ್ತ ಎಮ್ಮೆಗಳ ಹೆಣಗಳ ತುಂಬಾ ಹುಳುಗಳು ಮಿಜಿಗುಡುತ್ತಿದ್ದವು. ಮುಂದೆ ಎದುರಾಗಬಹುದಾದ ಮಹಾಮಾರಿಯೊಂದರ ಮುನ್ಸೂಚನೆಯಂತೆ ಊರು ಗಬ್ಬು ವಾಸನೆ ಹೊಡೆಯುತ್ತಿತ್ತು. ಊರೊಳಗೆ ಕಾಲಿಡಲಾಗದಂತೆ ಕೆಸರು ತುಂಬಿಕೊಂಡಿತ್ತು. ಆದರೆ ಬಹುತೇಕರು ತಮ್ಮ ಮನೆಗಳ ಒಳಗೆ ಅಳಿದ